Monday, June 8, 2015

ಜಾಗತೀಕರಣದ "ಯೋಗ"

(ಪುಂಗವ 15/06/2015)


ಭಾರತದ ಪ್ರಧಾನಿ ನರೇಂದ್ರ ಮೋದಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಯುಕ್ತ ರಾಷ್ಟ್ರ ಸಂಘದ ಸಾಮಾನ್ಯ ಸಭೆಯನ್ನುದ್ಧೇಶಿಸಿ ಮಾತನಾಡುವಾಗ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿವಸವನ್ನಾಗಿ ಆಚರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. (ಜೂನ್ 21 ಉತ್ತರ ಗೋಳಾರ್ಧದಲ್ಲಿ ಅತಿ ದೊಡ್ಡ ಹಗಲಿರುವ ದಿನ.) ಈ ಪ್ರಸ್ತಾವನೆಗೆ ವಿಶ್ವದ 175 ದೇಶಗಳು ಸಹ ಪ್ರಾಯೊಜಕರಾಗಿದ್ದಲ್ಲದೇ ಒಟ್ಟೂ 193 ದೇಶಗಳ ಸಹಮತಿಯೊಂದಿಗೆ ಅಂಗೀಕಾರಗೊಂಡಿದ್ದು ವಿಶ್ವಸಂಸ್ಥೆಯ ಇತಿಹಾಸದಲ್ಲೊಂದು ಮೈಲಿಗಲ್ಲು. ಶರೀರ ಮನ ಬುದ್ಧಿಗಳ ಸಮಗ್ರ ವಿಕಾಸದ ಯೋಗ ಪದ್ಧತಿಯಾದ ಆರು ಸಾವಿರ ವರ್ಷಗಳಿಗೂ ಹಿಂದಿನ ಇತಿಹಾಸವುಳ್ಳ ಭಾರತೀಯ ಮೂಲದ ಯೋಗ ಪದ್ಧತಿಗೆ ವಿಶ್ವದೆಲ್ಲೆಡೆ ಮಾನ್ಯತೆ ದೊರೆಯುತ್ತಿರುವದು ಹಾಗೂ ಭಾರತೀಯ ಜೀವನ ಶೈಲಿಯ ಬಗ್ಗೆ ವಿಶ್ವದ ಜನರ ಆಸಕ್ತಿ ಈ ಘಟನೆಯಿಂದ ಪ್ರತಿಬಿಂಬಿತವಾಗುವುದರ ಜೊತೆಗೆ, ಭಾರತೀಯ ರಾಜತಾಂತ್ರಿಕ ಕ್ಷಮತೆಯ ಪರಿಣತಿ ಹಾಗೂ ವಿಶ್ವದ ಆಗುಹೋಗುಗಳ ಮೇಲೆ ಭಾರತದ ಪ್ರಭಾವವೂ ಸ್ಪಷ್ಟವಾಗುತ್ತದೆ.

       ಯೋಗವೆಂದರೆ ಕೇವಲ ಆಸನಗಳು ಮತ್ತು ಪ್ರಾಣಾಯಾಮ ಎಂಬುದು ಸಾಮಾನ್ಯವಾಗಿ ಜನಜನಿತವಾದ ನಂಬಿಕೆ. ಆದರೆ ಯೋಗ ಕೇವಲ ಶರೀರ ಮನಗಳ ನಿಯಂತ್ರಣ ಸಾಧನೆಯ ತಂತ್ತಕ್ಕ್ಕೆ ಸೀಮಿತವಾದುದಲ್ಲ. ಯೋಗ ಎನ್ನವುದು ಭಾರತೀಯ ಆಧ್ಯಾತ್ಮಿಕ ಚಿಂತನೆಯ ಒಂದು ತತ್ತ್ವದರ್ಶನದ ಹೆಸರು. ಯೋಗಸೂತ್ರಗಳನ್ನು ಬರೆದ ಪತಂಜಲಿ ಮುನಿಯಿಂದ ಮೊದಲ್ಗೊಂಡು, ಭಗವದ್ಗೀತೆಯ ಯೋಗತತ್ವ, ಬುದ್ಧ, ಜೈನ ಶೈವ ಮುಂತಾದ ಪರಂಪರೆಯ ಯೋಗತತ್ವಗಳು, ಜೀವನಶೈಲಿ ಮತ್ತು ಆರೊಗ್ಯವನ್ನು ಪ್ರಧಾನವಾಗಿರಿಸಿರುವ ಪ್ರಚಲಿತ ವರ್ಷಗಳ ಯೋಗಾಭ್ಯಾಸಗಳವರೆಗೆ ಯೋಗ ಪರಂಪರೆ ಆಗಾಧ ವಿಸ್ತಾರದಲ್ಲಿ ಬೆಳೆದಿದೆ.

        ಯೋಗಕ್ಕೆ ಸಂಬಂಧಿಸಿದ ಮೂರು ವಾಕ್ಯಗಳು  ಪ್ರಸಿದ್ಧವಾಗಿವೆ, ಮೊದಲನೆಯದು  ಪತಂಜಲಿ ಯೋಗ ದರ್ಶನದ ವಾಕ್ಯ  ’ಯೋಗಃ ಚಿತ್ತವೃತ್ತಿ ನಿರೋಧಃ’ (ಮನಸ್ಸಿನ ಚಂಚಲ ವೃತ್ತಿಗಳನ್ನು ನಿಯಂತ್ರಿಸುವುದು). ಇನ್ನೆರಡು  ಭಗವದ್ಗೀತಯ ವಾಕ್ಯಗಳು,’ಯೋಗಃ ಕರ್ಮಸು ಕೌಶಲಮ್’  (ಕೆಲಸದಲ್ಲಿನ ಕುಶಲತೆಯೇ ಯೋಗ) ಮತ್ತು ’ಸಮತ್ವಮ್ ಯೋಗ ಉಚ್ಯತೇ’ (ಮನಸ್ಸಿನ ಸಂತುಲನವನ್ನು ಯೋಗವೆನ್ನುವರು).  ಈ ಮೂರು ಉಕ್ತಿಗಳು ಸಾಮಾನ್ಯ ವ್ಯಕ್ತಿಗೆ ಯೋಗವೆಂದರೇನು ಎನ್ನುವುದನ್ನು ತಿಳಿಸುತ್ತವೆ.  ಚಿತ್ತದ ವೃತ್ತಿಗಳನ್ನು ನಿರೋಧವನ್ನು ಏಕೆ ಮಾಡಬೇಕು ಅಂದರೆ, ಚಿತ್ತದ ವೃತ್ತಿಗಳನ್ನು ನಿಯಂತ್ರಿಸಿದ ಮೇಲೆ ಬರುವ ದೃಷ್ಟಿ ಸ್ಪಷ್ಟತೆಯಿಂದ ಸತ್ಯದ ದರ್ಶನವಾಗುತ್ತದೆ. ಇದು ಸಾಧ್ಯವಾಗಬೇಕು ಎಂದಾದರೆ ಪ್ರತಿ ಕೆಲಸವನ್ನೂ ಕುಶಲತೆಯಿಂದ ಮಾಡುವುದನ್ನು ಕಲಿಯಬೇಕಾಗುತ್ತದೆ. ಇದರಿಂದ ಸಿಗುವ ಉಪಲಬ್ಧಿ ಅಂತಿಮ ಸತ್ಯದ ದರ್ಶನ. ಅಂತಿಮ ಸತ್ಯದ ದರ್ಶನದಿಂದ ನಮಗೆ ತಿಳಿಯುವುದೆಂದರೆ ಅದೊಂದೇ ಸತ್ಯ ಬೇರೇನೂ ಅಲ್ಲ, ಕಾಣುವುದೆಲ್ಲವೂ ಸತ್ಯದ ವಿವಿಧ ರೂಪಗಳು, ಆದ್ದರಿಂದ ಎಲ್ಲರ ಬಗ್ಗೆ, ಎಲ್ಲ ವಿವಿಧ ರೂಪಗಳ ಬಗ್ಗೆ ಮನಸ್ಸಿನಲ್ಲಿ ಒಂದು ಸಮತ್ವ ಮೂಡುತ್ತದೆ. ವಿಭಿನ್ನ ಪರಿಸ್ಥಿತಿಗಳಲ್ಲೂ ಸಮತೆ ಮನಸ್ಸಿನಲ್ಲಿ ಕಾಣುತ್ತದೆ. ನಂತರ ವ್ಯಕ್ತಿಯು ’ಸುಖೇ ದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ’  ಎನ್ನುವಂತೆ ಎಲ್ಲ ಪರಿಸ್ಥಿತಿಯಲ್ಲೂ ಸಮನಾಗಿರುತ್ತಾನೆ.

       ಭಾರತೀಯರಾದ ನಾವು ಯೋಗವು ಜಗತ್ತಿಗೆ ಮಾನ್ಯವಾಗುವಂತೆ ನಾವು ಮಾಡಬೇಕು. ವೈಜ್ಞಾನಿಕವಾಗಿ ಅದನ್ನು ಜಗತ್ತಿನ ಮುಂದಿರಿಸಬೇಕು. ಎಷ್ಟರಮಟ್ಟಿಗೆ ಅಂದರೆ ಯೋಗವಂತು ಸತ್ಯ ಅದನ್ನು ವೈಜ್ಞಾನಿಕವಾಗಿ ಪ್ರಸ್ತುತ ಪಡಿಸಬೇಕು ಎಂದು ಇಂದು ನಾವು ಹೇಳುವಂತೆ, ನಾಳೆ ವಿಜ್ಞಾವಂತೂ ಸತ್ಯ ಆದರೆ ಅದನ್ನು ಯೋಗದ ಆಧಾರದ ಮೇಲೆ ಮಂಡಿಸಿದರೆ ನಾವು ಒಪ್ಪುತ್ತೇವೆ - ಎಂದು ಜಗತ್ತು ಹೇಳುವಂತೆ ಯೋಗ ವಿಚಾರವನ್ನು ಬೆಳೆಸಬೇಕು. 

     ಯೋಗ ಎಂದರೆ ಸೇರಿಸುವುದು, ಒಂದುಗೂಡಿಸುವುದು ಎನ್ನುವ ಅರ್ಥವಿದೆ. ಮಾನವನನ್ನು ದೈವತ್ವದೊಂದಿಗೆ ಜೋಡಿಸುವ ಯೋಗವು ಭಿನ್ನತೆಯಲ್ಲಿ ಒಡೆದಿರುವ ಸಮಾಜವನ್ನು ಹಾಗೂ ವಿವಿಧ ವಿಷಮತೆಗಳಿಂದಾಗಿ ವಿಘಟಿತವಾಗಿರುವ ವಿಶ್ವವನ್ನು ಒಂದುಗೂಡಿಸಲಿ.

ಯೋಗದ ಹಂತಗಳು
ಯೋಗಸೂತ್ರಗಳನ್ನು ರಚಿಸಿದ ಪತಂಜಲಿ ಮುನಿಯು  ಆತ್ಮಸಾಧನೆಗಾಗಿ ಅಷ್ಟ ಅಂಗಗಳಿರುವ ಯೋಗವನ್ನು ಹೇಳಿದ್ದಾನೆ.

ಯಮ- ಅಹಿಂಸೆ, ಸತ್ಯವನ್ನು ನುಡಿಯುವುದು, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ, ಅತಿಯಾಗಿ ಸಂಗ್ರಹ ಮಾಡದ ಸರಳ ಜೀವನ ಇವೇ  ಸಾರ್ವತ್ರಿಕ ನೀತಿ ನಿಯಮಗಳು
ನಿಯಮ -ದೇಹದ ಶುಚಿತ್ವ, ಮನಸ್ಸಿನ ತೃಪ್ತಿ ಹಾಗೂ ಸಂತೋಷ, ತಪಸ್ಸು, ಸ್ವಾಧ್ಯಾಯ, ದೈವಭಕ್ತಿ ಮುಂತಾದ  ವ್ಯಕ್ತಿಯ ನಡವಳಿಕೆಗೆ ಸಂಬಂಧಪಟ್ಟ ಆತ್ಮ ಶುದ್ಧೀಕರಣದ ನಿಬಂಧನೆಗಳು .
ಆಸನ- ದೇಹದ ನಿಲುಮೆ, ದೇಹಕ್ಕೆ ಆರೋಗ್ಯ ಮತ್ತು ಲಘುತ್ವವನ್ನು ನೀಡಬಲ್ಲ ವ್ಯಾಯಾಮಗಳು
ಪ್ರಾಣಾಯಾಮ-ಉಸಿರಾಟದ ಕ್ರಮಬದ್ಧ ಹತೋಟಿ
ಪ್ರತ್ಯಾಹಾರ-ಇಂದ್ರಿಯಗಳ ಮತ್ತು ಇಂದ್ರಿಯಾರ್ಥಗಳ ಪ್ರಾಬಲ್ಯದಿಂದ ಮನಸ್ಸಿನ ಬಿಡುಗಡೆ
ಧಾರಣ-ಕೇಂದ್ರೀಕರಣ, ಮನಸ್ಸನ್ನು ಏಕಾಗ್ರಗೊಳಿಸುವುದು.
ಧ್ಯಾನ-ಜಪ, ಚಿತ್ತವನ್ನು ಅವಿಚ್ಛಿನ್ನವಾಗಿ ಧ್ಯೇಯದಲ್ಲಿ ನೆಲೆನಿಲ್ಲಿಸುವುದು
ಸಮಾಧಿ-ಜಪದ ಧ್ಯೇಯವಾದ ಪರಮಾತ್ಮನಲ್ಲಿ ಸಾಧಕನ ಐಕ್ಯ


     ಯಮ ನಿಯಮಗಳು ವ್ಯಕ್ತಯಲ್ಲಿ ಕಾಮ ಮತ್ತು ಉದ್ವೇಗಗಳನ್ನು ನಿಗ್ರಹಿಸಿ ಸಮಾಜದ ಇತರರೊಡನೆ ಸಮರಸವಾಗಿರುವಂತೆ ಮಾಡುತ್ತವೆ. ಆಸನವು ದೇಹವನ್ನು ಆರೋಗ್ಯಕರವಾಗಿ ಮತ್ತು ಬಲಯುತವಾಗಿರಿಸಿ ಪ್ರಕೃತಿಯೊಡನೆ ಸಮರಸವಾಗಿರುವಂತೆ ಮಾಡುತ್ತದೆ. ಪ್ರಾಣಯಾಮ ಮತ್ತು ಪ್ರತ್ಯಾಹಾರಗಳು ಉಸಿರಾಟವನ್ನು  ಕ್ರಮಬದ್ಧಗೊಳಿಸಿ ಮನಸ್ಸಿನ ಮೇಲೆ ಹತೋಟಿಯನ್ನು ಕೊಡುತ್ತವೆ. ಇದರಿಂದ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. ಧಾರಣ, ಧ್ಯಾನ ಮತ್ತು ಸಮಾಧಿ ಇವು ಯೋಗಸಾಧಕನ್ನು ಆತ್ಮನ ಅಂತರಂಗದೊಳಕ್ಕೆ  ಕೊಂಡೊಯ್ಯುತ್ತವೆ. ಧ್ಯಾನಪರನಾದ ಯೋಗಿಯು ತಾನೇ ತಾನಾಗಿ ಸ್ವ- ಭಾವವನ್ನು ಹೊಂದಿ ಪರಮಾತ್ಮನ ಅಂಶವಾದ ತನ್ನ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಯಜ್ಞಾತ್ವಾ ಸರ್ವಮಿದಂ ವಿಜ್ಞಾತೋ ಭವತಿ - ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ ಆಗುವುದೋ, ಎನ್ನುವ ಸ್ಥಿತಿಯೆಡೆಗೆ ಯೋಗಿಯು ಸಾಗುತ್ತಾನೆ.

Monday, May 25, 2015

ನೆಲಕ್ಕೆ ನೀರುಣಿಸಲು ನೂರಾರು ದಾರಿಗಳು

(ಪುಂಗವ 01/06/2015)

      ಪೃಥ್ವಿಯ ಮುಕ್ಕಾಲು ಪಾಲು ಜಲವಿದ್ದರೂ ಸಮಗ್ರ ಜೀವಸಂಕುಲ ನೀರಿಗಾಗಿ ಆಶ್ರಯಿಸಿದ್ದು ಮಳೆಯನ್ನೇ. ಸಮುದ್ರ, ನದಿಕೆರೆಗಳ ನೀರು ಆವಿಯಾಗಿ ಮತ್ತೆ ಮಳೆಯಾಗಿ ಭೂಮಿಯ ಮೇಲೆ ಸುರಿದು ವಿತರಣೆಯಾಗಿ, ನದಿಗಳಲ್ಲಿ ಹರಿದು, ಕೆರೆ ಬಾವಿಗಳನ್ನು ತುಂಬಿಸಿ ಮಣ್ಣಿನಲ್ಲಿ ಇಳಿದು ಅಂತರ್ಜಲಕ್ಕೆ ಮರುಪೂರಣೆಯಾಗುವ ಜಲಚಕ್ರದ ವ್ಯವಸ್ಥೆ ಜೀವಕೋಟಿಯ ನೀರಿನ ಅವಶ್ಯಕತೆಯನ್ನು ಪೋರೈಸುತ್ತಿತ್ತು. ಈ ಪ್ರಾಕೃತಿಕ ವ್ಯವಸ್ಥೆಯನ್ನು ಅರಿತಿದ್ದ ನಮ್ಮ ಪೂರ್ವಜರು ಅದಕ್ಕೆ ತಕ್ಕಂತೆ ಜಲಸಂರಕ್ಷಣೆ ಮತ್ತು ಬಳಕೆಯ ವಿಧಾನಗಳನ್ನು ವಿಕಸನಗೊಳಿಸಿದ್ದರು. ಮಳೆಯ ನೀರು ಸಂಗ್ರಹಣಾ(ಕ್ಯಾಚ್‌ಮೆಂಟ್) ಪ್ರದೇಶಗಳಿಂದ ಒಟ್ಟಾಗಿ ಹಳ್ಳ ಕೋಡಿಗಳಲ್ಲಿ ಹರಿದು ಕೆರೆಕಟ್ಟೆಗಳನ್ನು ತುಂಬಿಸುವುದು. ಹೀಗೆ ಸಂಗ್ರಹವಾದ ನೀರಿನಿಂದಾಗಿ ಕೆರೆಯ ಕೆಳಗಿನ ಪ್ರದೇಶದ ಹೊಲಗಳ ಬಾವಿ ಹಾಗೂ ಕಲ್ಯಾಣಿಗಳಲ್ಲಿ ಸದಾ ನೀರಿರುತ್ತಿದ್ದು ಕೃಷಿಗೆ, ದನಕರುಗಳು ಕುಡಿಯಲು ಹಾಗೂ ಗೃಹಕಾರ್ಯಗಳಿಗೆ ಬಳಕೆಯಾಗುತ್ತಿದ್ದವು. ಹಾಗೆಯೇ ಹೊಲ ತೋಟಗಳಲ್ಲೂ ಒಂದು ಗುಂಡಿ ಇರುತ್ತಿತ್ತು. ಮಳೆ ಬಂದಾಗ ಇವುಗಳಲ್ಲಿ ಶೇಖರವಾಗುವ ನೀರು ತರಕಾರಿ ಬೆಳೆಯಲು, ದನಗಳ ಮೈತೊಳೆಸಲು ಹೀಗೆ ವಿಧವಿಧವಾಗಿ ಬಳಕೆಯಾಗುವುದರ ಜೊತೆಗೆ ನಿಧಾನವಾಗಿ ನೆಲದಲ್ಲಿಯೂ ಇಂಗುತ್ತಿತ್ತು.


      ಆದರೆ ಇಂದು ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ವಿವೇಚನಾರಹಿತ ಸಂಪನ್ಮೂಲಗಳ ಬಳಕೆ, ನದಿ ಪಾತ್ರದ ಜಲಸಂಗ್ರಹಣಾ ಪ್ರದೇಶದಲ್ಲಿನ ಚಟುವಟಿಕೆಗಳು, ಕೆರೆಗಳ ಒತ್ತುವರಿ ಹಾಗೂ ನಿರ್ವಹಣೆಯ ಕೊರತೆ, ಅತಿಯಾಗಿ ಕೊಳವೆ ಬಾವಿಗಳನ್ನು ಕೊರೆಯುವುದು, ಕಾಡಿನ ನಾಶ ಮೊದಲಾದವುಗಳಿಂದ ಸಾಂಪ್ರದಾಯಿಕ ಜಲಮೂಲಗಳು ಬತ್ತಿಹೋಗುತ್ತಿವೆ. ಇದು ಒಂದೆರಡು ಊರುಗಳ ಸಮಸ್ಯೆಯಲ್ಲ. ಈ ಹಿನ್ನೆಲೆಯಲ್ಲಿ ಜಲಕ್ಷಾಮದ ಸಮಸ್ಯೆಯ ಗಂಭೀರತೆಯ ಪ್ರಜ್ಞೆ ಬೆಳೆದಿದ್ದರಿಂದ ಅನೇಕ ಪ್ರದೇಶಗಳಲ್ಲಿ ಮಳೆ ನೀರಿನ ಸಂಗ್ರಹ, ನೀರಿಂಗಿಸುವುದ ಕಾಡನ್ನು ಬೆಳೆಸುವುದು ಹೀಗೆ ಅನೇಕ ರೀತಿಯ ಜಲಸಂವರ್ಧನೆ ಕಾರ್ಯಗಳು ನಡೆಯುತ್ತಿರುವುದು ಸಮಾಧಾನಕರ ಸಂಗತಿ. ಬತ್ತಿಹೋಗಿರುವ ಕುಮುದ್ವತಿ ನದಿ ಪಾತ್ರದ ಹಳ್ಳಿಗಳಾದ ನೆಲಮಂಗಲ ತಾಲೂಕಿನ ಕಾಸರಘಟ್ಟ , ಮಹಿಮಾಪುರ, ಕೆರೆಕತ್ತಿಗನೂರು, ಆಲದಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ನದಿ ಪುನಶ್ಚೇತನ, ಕೆರೆ ಕಲ್ಯಾಣಿ ಮುಂತಾದ ಜಲಮೂಲಗಳ ಸಂರಕ್ಷಣೆಯ ಕಾರ್ಯ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದ್ದು ಉತ್ತಮ ಪರಿಣಾಮ ಕಂಡುಬಂದಿದೆ. ಭಾರತೀಯ ಕಿಸಾನ ಸಂಘದ ಸ್ಥಳೀಯ ಕಾರ್ಯಕರ್ತರು ಗ್ರಾಮಸ್ಥರನ್ನು ಜೊತೆಗೂಡಿಸಿ ಕೆಲವು ಸಂಘಸಂಸ್ಥೆಗಳ ನೆರವಿನಿಂದ ಮಾದರಿ ಕಾರ್ಯವನ್ನು ನಡೆಸುತ್ತಿದ್ದಾರೆ. 


ಮರಗಿಡಗಳನ್ನು ಬೆಳೆಸುವ ಯೋಜನೆ
      ಮಳೆ, ಅಂತರ್ಜಲ ಹಾಗೂ ಮರಗಳಿಗೆ ತುಂಬ ಹತ್ತಿರದ ಸಂಬಂಧವಿದೆ. ಮರಗಳು ಮೋಡಗಳನ್ನು ತಡೆದು ವಾತಾವರಣವನ್ನು ತಂಪಾಗಿಸಿ ಮಳೆಸುರಿಸುವುದು ಒಂದಾದರೆ, ನೆಲದ ಆಳಕ್ಕೆ ಇಳಿಯುವ ಮರದ ಬೇರುಗಳು ನೀರು ಇಂಗಲು ಸಹಕಾರಿಯಾಗಿವೆ. ಇದನ್ನು ಅರಿತು ಮಹಿಮಾಪುರ, ಆಲದಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳ ಗುಡ್ಡಗಾಗು ಪ್ರದೇಶದಲ್ಲಿ ದೊಡ್ಡಪ್ರಮಾಣದಲ್ಲಿ ಕಾಡನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಮಹಿಮಾಪುರ ಗ್ರಾಮದ ಜಾತ್ರಾ ಮೈದಾನ, ಗುಂಡುತೋಪುಗಳಲ್ಲಿ ಗ್ರಾಮಸ್ಥರೇ ಸೇರಿ ಅತ್ತಿ, ಮಾವು, ನೇರಳೆ, ಹಿಪ್ಪಲಿ, ಆಲ, ಹಲಸು, ಸೀತಾಫಲ ಮುಂತಾದ ವಿವಿಧ ಜಾತಿಯ ಮರಗಳನ್ನು ಬೆಳೆಸುತ್ತಿದ್ದಾರೆ. ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೂಲಕ ಗಿಡಗಳಿಗೆ ನೀರುಣಿಸಿ ಆರೈಕೆ ಮಾಡಲಾಗುತ್ತದೆ. ಹೊಸದಾಗಿ ಕಾಡುಬೆಳಸುವುದರ ಜೊತೆಗೆ ಗುಂಡುತೋಪಿನ ಮರಗಳನ್ನು ಕಾಪಾಡುವುದಕ್ಕೂ ಆದ್ಯತೆ ನೀಡಲಾಗುತ್ತದೆ. ಬೆಂಗಳೂರು ಮುಂತಾದ ನಗರ ಪ್ರದೇಶದ ಕೆಲವು ಸ್ವಯಂಸೇವಕರು ಹಾಗೂ ಸಂಘಟನೆಗಳು ಗ್ರಾಮಸ್ಥರ ಜೊತೆಗೆ ಗಿಡನೆಡುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.


ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರು ಗ್ರಾಮದ ನಿವಾಸಿ ಪ್ರಗತಿಪರ ರೈತ, ಸಿಆಯ್‌ಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧ ಶ್ರೀ ಗಂಗಣ್ಣನವರ ಪ್ರಕೃತಿ ಪ್ರೇಮ ಮತ್ತು ಅನುಭವ ಜ್ಞಾನ ವಿಸ್ಮಯವನ್ನು ಮೂಡಿಸುವಂತಹುದು. ತಮ್ಮ ಹಳ್ಳಿಯ ಸುತ್ತಲಿನ ಗುಡ್ಡಗಾಡಿನಲ್ಲಿ ಬೆಳೆಯುವ ಮರಗಳಿಂದ ಹಿಡಿದು ಸಣ್ಣ ಪೊದೆ-ಗಿಡಗಳು, ಬಳ್ಳಿ ಮೂಲಿಕೆಗಳು ಮತ್ತು ಅವುಗಳ ಔಶಧಿಯ ಗುಣಗಳನ್ನು ಆಳವಾಗಿ ತಿಳಿದುಕೊಂಡಿರುವ ಗಂಗಣ್ಣನವರು, ನೆಟ್ಟ ಪ್ರತಿಯೊಂದು ಗಿಡವನ್ನು ವಾತ್ಸಲ್ಯದಿಂದ ಆರೈಕೆ ಮಾಡಿ ಬೆಳೆಸುತ್ತಿದ್ದಾರೆ. ಅಂತರ್ಜಲದ ಕುರಿತು ಅವರು ಹೇಳುವ ಮಾತು ತುಂಬ ಪ್ರಸ್ತುತವಾಗಿದೆ: "ಅಂತರ್ಜಲ ಆಪತ್ಕಾಲದ ನಿಧಿ. ಆದ್ದರಿಂದ ಅತೀ ಅಗತ್ಯಬಿದ್ದಾಗ ಮಾತ್ರ ಬೋರವೆಲ್ ಅಗೆದು ಅದನ್ನು ಬಳಸಬೇಕು. ಇಂದು ಭೂಮಿಯ ಮೇಲ್ಪದರದಿಂದ ಮೂವತ್ತು ನಲವತ್ತು ಅಡಿ ಅಗೆದರೂ ತೇವಾಂಶ ಇರುವುದಿಲ್ಲ. ಹೀಗಾದರೆ ಗಿಡಮರಗಳು ಹೇಗೆ ಬದುಕಬಲ್ಲವು? ಆದ್ದರಿಂದ ಮೊದಲು ಭೂಮಿಯ ಮೇಲ್ಪದರದಲ್ಲಿ ನೀರನ್ನು ಇಂಗಿಸಿದರೆ ಅಂತರ್ಜಲ ತನ್ನಿಂದ ತಾನೇ ಪೂರಣವಾಗುತ್ತದೆ. ಭೂಮಿಯ ಆಳಕ್ಕೆ ಇಳಿಯುವ ಮರದ ಬೇರುಗಳು ನೀರನ್ನು ಇಂಗಿಸುವ ಕಾರ್ಯವನ್ನು ತಾವೇ ಮಾಡುತ್ತವೆ."

ನೀರಿಂಗಿಸುವ ಹೊಂಡಗಳು
      ಮಳೆಯ ನೀರನ್ನು ಸಂಗ್ರಹಿಸಿ ಭೂಮಿಯಲ್ಲಿ ಇಂಗಿಸುವ ಸಲುವಾಗಿ ತೋಪಿನಲ್ಲಿ ಅಲ್ಲಲ್ಲಿ ಹೊಂಡಗಳನ್ನು ತೋಡಲಾಗಿದೆ. ಮಹಿಮಾಪುರ ಗ್ರಾಮದ ತೋಪಿನಲ್ಲಿ ಅಗೆಯಲಾದ ಸುಮಾರು ೬೦ ಮೀ ಅಗಲ ೧೨೦ಮೀ ಇಂತಹ ಒಂದು ಹೊಂಡ ಸುಮಾರು ಎರಡು ಲಕ್ಷ ಲೀಟರಿಗೂ ಹೆಚ್ಚು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅರ್ಧದಷ್ಟು ಆವಿಯಾದರೂ ಬಹುದೊಡ್ಡ ಪ್ರಮಾಣದಲ್ಲಿ ಹರಿದು ಹೋಗಬಹುದಾಗಿದ್ದ ನೀರು ಅಲ್ಲಿಯೇ ಮಣ್ಣಿನಲ್ಲಿ ಇಂಗಿ ಅಂತರ್ಜಲವನ್ನು ಸೇರುವುದು. ಈ ಇಂಗುಗುಂಡಿಯ ಪರಣಾಮದಿಂದಾಗಿ ಅಲ್ಲಿಯೇ ಹತ್ತಿರದಲ್ಲಿನ ಬತ್ತಿಹೋಗಿದ್ದ ಕೊಳವೆ ಬಾವಿಗೆ ಮತ್ತೆ ಜೀವ ಬಂದಿದೆ. ಹೊಂಡದ ಮಣ್ಣಿನ ಮೇಲ್ಪದರದಲ್ಲೂ ತೇವಾಂಶ ಹೆಚ್ಚಾಗಿರುವುದರಿಂದ ಸುತ್ತಲಿನ ಪರಿಸರದಲ್ಲಿ ಮರಗಳು ಮತ್ತು ಪೊದೆಗಳು ಹುಲುಸಾಗಿ ಬೆಳೆದಿವೆ.


ಸೀಡ್ ಬಾಲ್ ಗಳು ಮತ್ತು ಬೀಜ ಎರಚುವುದು


’ಸೀಡ್ ಬಾಲ್’ ಗಿಡಬೆಳೆಸುವ ಒಂದು ವಿಶಿಷ್ಟ ಹಾಗೂ ಸರಳ ವಿಧಾನ. ಮಣ್ಣಿನೊಂದಿಗೆ ದನದ ಸಗಣಿಯನ್ನು ಬೆರೆಸಿ ಉಂಡೆಕಟ್ಟುವ ಮಟ್ಟಿಗೆ ಹದಮಾಡಿಕೊಳ್ಳುವುದು. ಬೀಜಗಳನ್ನು ಹಾಕಿ ಮಣ್ಣಿನ ಉಂಡೆ (ಸೀಡ್‌ಬಾಲ್)ಗಳನ್ನು ಕಟ್ಟಿ ನೆರಳಿನಲ್ಲಿ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳುವುದು. ಮಳೆಗಾಲದ ಸಂದರ್ಭದಲ್ಲಿ ಪೊದೆಗಳ ಮಧ್ಯೆ, ಒಣಗಿ ಕಿತ್ತಿರುವ ಮರದ ಬುಡದಲ್ಲಿ, ಸಣ್ಣ ಸಣ್ಣ ಹೊಂಡಗಳಲ್ಲಿ ಹೀಗೆ ಇಂತಹ ಬೀಜ ಉಂಡೆಗಳನ್ನು ಬಿಸಾಡುವುದು. ತೇವಾಂಶ ಸಿಕ್ಕಾಗ ಉಂಡೆಯೊಳಗಿನ ಬೀಜವು ಮೊಳಕೆಯೊಡೆದು ಅಲ್ಲೇ ಬೇರು ಬಿಟ್ಟು ಗಿಡವಾಗುವುದು. ಇದು ಶಾಲಾ ಮಕ್ಕಳೂ ಆಟವಾಡುತ್ತ ಮಾಡುವ ಕೆಲಸ. ಹಾಗೆಯೇ ವಿವಿಧ ರೀತಿಯ ತರಕಾರಿ ಗಿಡಗಳು ಹಾಗೂ ಬಳ್ಳಿಗಳ ಬೀಜಗಳನ್ನು ಸಂಗ್ರಹಿಸಿ ಹದವಾದ ಮಣ್ಣಿರುವ ಕಡೆ, ಬಂಡೆಗಳ ನಡುವೆ ಹೀಗೆ ಸುಮ್ಮನೆ ಎರಚುವುದು. ಮಳೆಗಾಲದ ತೇವಾಂಶ ತಾಕಿದೊಡನೆ ಅವು ಮೊಳಕೆಯೊಡೆದು ಅಲ್ಲಿಯೇ ಬೆಳೆಯುತ್ತವೆ. ಹೀಗೆ ಬೀಜ ಎರಚುವುದರಿಂದ ಹುಟ್ಟುಕೊಂಡು ಬೆಳೆದಿರುವ ಬಳ್ಳಿಗಳು, ಗಿಡಗಳು, ಸೊಪ್ಪಿನ ಹಾಗೂ ತರಕಾರಿ ಸಸ್ಯಗಳು ಮಹಿಮಾಪುರದ ಮಹಿಮರಂಗ ಸ್ವಾಮಿ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿವೆ.                   

ಮಳೆನೀರಿನ ಹರಿವಿಗೆ ಅಡ್ಡದಾಗಿ ಒಡ್ಡು ಕಟ್ಟುವುದು, ಇಂಗು ಬಾವಿ
        ಮಳೆ ನೀರಿನ ಹರಿವಿಗೆ ಅಲ್ಲಲ್ಲಿ ಸಣ್ಣ ಸಣ್ಣ ಒಡ್ಡುಗಳನ್ನು ಕಟ್ಟುವುದು ಮಣ್ಣಿನಲ್ಲಿ ನೀರಿಂಗಿಸುವ ಇನ್ನೊಂದು ವಿಧಾನ. ಒಡ್ಡುಗಳಲ್ಲಿ ಸಂಗ್ರಹವಾದ ನೀರು ಸುತ್ತಲಿನ ಭೂಮಿಯ ತೇವಾಂಶವನ್ನು ಹೆಚ್ಚಿಸುವುದರಿಂದ ಆ ಪ್ರದೇಶಗಳಲ್ಲಿ ಮರಗಿಡಗಳು ಚೆನ್ನಾಗಿ ಬೆಳೆಯುವುವು. ಜೊತೆಗೆ ಆಳಕ್ಕಿಳಿದ ಬೇರುಗಳ ಸಂದಿನಲ್ಲಿ ನೀರು ಭೂಮಿಗೆ ಇಂಗುವುದು. ಒಡ್ಡುಗಳ ಜೊತೆಗೆ ಆಧುನಿಕ ಇಂಗುಬಾವಿಗಳನ್ನೂ ನಿರ್ಮಿಸಲಾಗಿದೆ. ಆದರೆ ಈ ಇಂಗುಬಾವಿಗಳ ನಿರ್ಮಾಣಕ್ಕೆ ವೆಚ್ಚ ಹೆಚ್ಚು ಆದರೆ ಪರಿಣಾಮ ಕಡಿಮೆ ಎನ್ನುವುದು ಕಾರ್ಯಕರ್ತರ ಅನಿಸಿಕೆ.

ಕಾಸರಘಟ್ಟದ ನೀರು ನಿರ್ವಹಣಾ ಸಹಕಾರಿ ಸಂಘ
      ಕಾಸರಘಟ್ಟ ಗ್ರಾಮದಲ್ಲಿ ನೀರು ನಿರ್ವಹಣೆಗಾಗಿಯೇ ಸಹಕಾರಿ ಸಂಘ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸುತ್ತಲಿನ ಕೆರೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ. ಕೆರೆಗಳಲ್ಲಿ ಮೀನು ಸಾಕಲು ವಾರ್ಷಿಕ ಗುತ್ತಿಗೆಯನ್ನು ನೀಡಲಾಗುತ್ತಿದ್ದು ಇದರಿಂದ ಕೆರಗಳು ಸ್ವಚ್ಛವಾಗಿರುವುದರ ಜೊತೆಗೆ ಸಂಘ ಆದಾಯವನ್ನೂ ಗಳಿಸುತ್ತಿದೆ. ಗ್ರಾಮಸ್ಥ ಕೃಷಿಕರೇ ಈ ಸಂಘದ ನಿರ್ದೇಶಕರಾಗಿದ್ದು ಊರಿನವರ ಸಹಕಾರದಿಂದ ಜಲಮೂಲಗಳ ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಿದೆ. ಜೊತೆಗೆ ಕಾಡು ಬೆಳಸುವ ಯೋಜನೆ, ಗ್ರಾಮಸ್ಥರಲ್ಲಿ ನೀರಿನ ಬಳಕೆಯ ಕುರಿತು ಶಿಕ್ಷಣ ನೀಡುವ ಕಾರ್ಯದಲ್ಲೂ ಸಂಘ ತೊಡಗಿಕೊಂಡಿದೆ.

       ಇಂದು ಬಹುತೇಕ ಗ್ರಾಮಗಳು ಜಲಕ್ಷಾಮದ ಸಮಸ್ಯೆಯನ್ನು ಎದುರಿಸುತ್ತಿರುವುದಕ್ಕೆ ಕೇವಲ ಮಳೆಯ ಪ್ರಮಾಣದಲ್ಲಿನ ವ್ಯತ್ಯಾಸ ಕಾರಣವಲ್ಲ.  ನೀರಿನ ಮೂಲಗಳನ್ನು ಉಳಿಸುವುದರಲ್ಲಿನ ಉದಾಸೀನತೆ ಹಾಗೂ ವಿವೇಚನಾರಹಿತ ಬಳಕೆ ಜಲ ಸಮಸ್ಯೆಯ ಕಾರಣಗಳಲ್ಲಿ ಪ್ರಮುಖವಾದವು. ಕಾಸರಘಟ್ಟದ ಸುತ್ತಲಿನ ಗ್ರಾಮಸ್ಥರು ಅನುಸರಿಸುತ್ತಿರುವ ವಿಧಾನಗಳು ತುಂಬ ಸರಳ. ಅವರ ಪರಿಶ್ರಮದಿಂದಾಗಿ ಕೆರೆಕತ್ತಿಗನೂರಿನ ಕೆರೆಯಲ್ಲಿ ಬೇಸಿಗೆಯಲ್ಲಿಯೂ ಸಾಕಷ್ಟು ನೀರಿದೆ, ಅಲ್ಲಿನ ಕಲ್ಯಾಣಿ ಹಾಗೂ ಬಾವಿಗಳಲ್ಲಿಯೂ ನೀರಿದೆ.

         ನಮ್ಮ ನಮ್ಮ ಊರುಗಳಲ್ಲಿರುವ ಕೆರೆಗಳ ಪುನಶ್ಚೇತನ ಕಾರ್ಯದ ಜೊತೆಗೆ ಸ್ಥಳೀಯ ಪರಿಸರಕ್ಕೆ ಹೊಂದುವ ಜಲಸಂವರ್ಧನ ಕಾರ್ಯಗಳನ್ನು ಕೈಗೊಳ್ಳುವುದು ಇಂದು ಒಂದು ರೀತಿಯ ಆಂದೋಲನವಾಗಿ ನಡೆಯಬೇಕಾದ ಕೆಲಸವಾಗಿದೆ. ಏಕೆಂದರೆ ಜೀವಜಲ ಅಮೂಲ್ಯವಾದುದು.

Thursday, May 7, 2015

ಓ ಹುಡುಗಿಯರೇ ನೀವೇಕೆ ಹೀಗೆ ?

          ಕೆಲವು ವರ್ಷಗಳ ಹಿಂದಿನ ಮಾತು. ನಾನು ಕೆಲಸ ಮಾಡುವ ಸಂಸ್ಥೆಗೆ ಬಂದಿದ್ದ ಓರ್ವ ಅಮೇರಿಕದ ಕ್ಲೈಂಟ್‌ನೊಟ್ಟಿಗೆ ಊಟಕ್ಕೆ ಕುಳಿತಿದ್ದಾಗ ಮಾತು ಕುಟುಂಬ ಮದುವೆಗಳ ಕಡೆಗೆ ಹೊರಳಿತ್ತು. ಈಗಾಗಲೆ ಎರಡು ಮೂರು ಮದುವೆಯಾಗಿ ವಿಚ್ಛೇದನವೂ ಆಗಿ ಹೊಸ ಗರ್ಲ್‌ಫ್ರೆಂಡ್ ಒಟ್ಟಿಗೆ ಮುಂದಿನ ಮದುವೆಯ ಯೋಜನೆಗೆ ತೊಡಗಿದ್ದ ಆತ ಕೇಳಿದ್ದ ’ಭಾರತದಲ್ಲಿ ಯಾಕೆ ಮದುವೆಗಳು ಅಷ್ಟು ಮುರಿದು ಬೀಳುವುದಿಲ್ಲ?’ (why marriages last so long in India and will not breakup much?). ಆತನಿಗೆ ಅದೊಂದು ವಿಸ್ಮಯವಾಗಿತ್ತು. ಅಂದು ಸಹೋದ್ಯೋಗಿಯೊಬ್ಬರು ನೀಡಿದ್ದ ಉತ್ತರ ತುಂಬ ಸೂಕ್ತವಾಗಿತ್ತು. ಭಾರತದಲ್ಲಿ ಮದುವೆಗಳು ನಡೆಯುವುದು ಕೇವಲ ಗಂಡು ಹೆಣ್ಣು ಇಬ್ಬರ ನಡುವೆ ಮಾತ್ರವಲ್ಲ. ವಿವಾಹ ಎರಡು ಕುಟುಂಬಗಳ ನಡುವೆ, ಎರಡು ಪರಿವಾರಗಳ ನಡುವೆ ಸಂಬಂಧವನ್ನು ಬೆಸೆಯುತ್ತದೆ. (marriage builds relation between two families). ಇದು ನಮ್ಮ ಅನುಭವ. ಕನ್ಯಾ ವರಯತೇ ರೂಪಮ್ ಮಾತಾ ವಿತ್ತಂ ಪಿತಾ ಶ್ರುತಮ್| ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮ್ ಇತರೇ ಜನಾಃ|| - ವಧುವು ಹುಡುಗನ ರೂಪವನ್ನೂ, ವಧುವಿನ ತಾಯಿಯು ಸಂಪತ್ತನ್ನು ನೋಡಿದರೂ ತಂದೆಯಾದವನು ವರನ ಗುಣಾವಗುಣಗಳು, ಕೌಟುಂಬಿಕ ಹಿನ್ನೆಲೆಗಳ ಬಗ್ಗೆ ಜನರು ಹೇಳುವುದನ್ನು ಮತ್ತು ಬಂಧುವರ್ಗದವರು ಕುಲ ಪರಿವಾರಗಳನ್ನು ಮಹತ್ತೆಂದು ನೋಡುತ್ತಾರೆ ಎನ್ನುವಲ್ಲಿ ನಮ್ಮಲ್ಲಿ ವೈವಾಹಿಕ ಸಂಬಂಧವನ್ನು ಬೆಳೆಸುವಲ್ಲಿನ ಮಾನದಂಡದ ಅರಿವಾಗುತ್ತದೆ. ಹಾಗೇಯೇ ಗುಣಮ್ ಪೃಚ್ಛಸ್ವ ಮಾ ರೂಪಮ್ ಶೀಲಮ್ ಪೃಚ್ಛಸ್ವ ಮಾ ಕುಲಮ್ ಸಿದ್ಧಿಮ್ ಪೃಚ್ಛಸ್ವ ಮಾ ವಿದ್ಯಾಮ್ ಸುಖಮ್ ಪೃಚ್ಛಸ್ವ ಮಾ ಧನಮ್ ಎನ್ನುವ ಸುಭಾಷಿತದಲ್ಲಿ ಹೇಳುವಂತೆ ರೂಪಕ್ಕಿಂತ ಆತನ ಗುಣ, ಕುಲಕ್ಕಿಂತ ಆತನ ನಡತೆ, ವಿದ್ಯೆಗಿಂತ ಆತ ಗಳಿಸಿದ ಸಿದ್ಧಿ, ವಿದ್ಯೆಯನ್ನು ವಿನಿಯೋಗಿಸಬಲ್ಲ ಕ್ಷಮತೆ, ಧನಸಂಪತ್ತಿಗಿಂತ ಮಿಗಿಲಾಗಿ ಆತನ ಜೀವನ ಸುಖ ಇವು ಒಬ್ಬ ವ್ಯಕ್ತಿಯನ್ನು ಅಳೆಯಬಲ್ಲ ಸೂಕ್ತ ಅಳತೆಗೋಲುಗಳು. ಈ ರೀತಿಯ ಮಾನದಂಡಗಳಿಂದ ವರಸಾಮ್ಯ ಗುಣದೋಷಗಳನ್ನು ಗ್ರಹಿಬಲ್ಲ ಹಿರಿಯರಿಂದ ನಿಶ್ಚಯವಾಗಿ ಪರದೆ ಸರಿಯುವವರೆಗೂ ಒಬ್ಬರನ್ನೊಬ್ಬರು ಮುಖವನ್ನೂ ನೋಡಿರದ ಗಂಡು-ಹೆಣ್ಣುಗಳ ವೈವಾಹಿಕ ಸಂಬಂಧಗಳು ಬಹುತೇಕ ಸುಖೀ ದಾಂಪತ್ಯವಾಗುವುದು ನಮ್ಮ ನಡುವಿನ ಸಮಾಜದಲ್ಲಿ ಸಹಜವಾಗಿತ್ತು.

         ಆದರೆ ಕಾಲಾಚಾರಗಳು ಬದಲಾಗಿವೆ. ಕಾಲೇ ಕಾಲೇ ನವಾಚಾರಃ ನವಾ ವಾಣೀ ಮುಖೇ ಮುಖೇ ಎನ್ನುವಂತೆ ಆಚಾರಗಳೂ ಬದಲಾಗಿವೆ, ಬದಲಾಗತಕ್ಕದ್ದೇ, ಅದು ಪ್ರಕೃತಿಯ ನಿಯಮ. ಇಂದಿನ ಕಾಲದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಸಾಮಾನ್ಯವಾಗಿ ಇದೆ, ಅದರಲ್ಲೂ ಹುಡುಗಿಯರಿಗೆ ಸ್ವಲ್ಪ ಜಾಸ್ತಿಯೇ ಇದೆ. ಜೊತೆಗೆ ಕೆಲವು ಸಮುದಾಯಗಳಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಕಡಿಮೆಯಿದೆ ಎಂಬ ಸ್ವಲ್ಪ ವಾಸ್ತವ ಆದರೆ ಹೆಚ್ಚಿನ ಗುಲ್ಲು ಹಬ್ಬಿದಾಗಿನಿಂದ ಹುಡುಗಿಯರ ಆಯ್ಕೆಯ ಸ್ವಾತಂತ್ರ್ಯದ ವ್ಯಾಪ್ತಿ  ಹಿಗ್ಗಿದ್ದಷ್ಟೇ ಅಲ್ಲ ಆಯ್ಕೆ ಚೌಕಾಶಿಯ ವ್ಯವಹಾರದ ಮಟ್ಟಕ್ಕೆ ಇಳಿದಿದೆಯೆಂದರೆ ಅತಿಶಯೋಕ್ತಿಯೇನೂ ಅಲ್ಲ. ಗಂಡನ್ನು ’ಆರಿಸು’ವಾಗ ಹೇಗೇಗಿರಬೇಕು ಏನೇನಿರಬೇಕು ಎಂದು ಹುಡುಗಿಯೋ ಅವಳ ಹೆತ್ತವರೋ ಮುಂದಿಡುವ ಕಂಡೀಶನ್ನುಗಳು ಕಳವಳಕಾರಿಯಾದರೂ ಕೇಳಲೂ ಬಹಳ ಮಜವಾಗಿವೆ. ಕೃಷಿ ಕೆಲಸ ಮಾಡುತ್ತ ಅಥವಾ ಇನ್ನು ಯಾವುದೋ ವ್ಯವಹಾರ ಮಾಡುತ್ತ ಊರಿನ ಕಡೆ ಮನೆಯಲ್ಲಿ ತಂದೆತಾಯಿಯರೊಡನೆ ತುಂಬು ಕುಟುಂಬದಲ್ಲಿ(?) ವಾಸವಾಗಿರುವ ಮಾಣಿಗೆ ಹೆಣ್ಣು ಸಿಗುವುದಿಲ್ಲ ಎನ್ನುವುದು ಬಹಳ ಹಳೆಯ ವಿಚಾರವಾಯಿತು. ಕೆಲವು ವರ್ಷಗಳ ಕೆಳಗೆ ಸ್ಟಾರ್ ವ್ಯಾಲ್ಯೂ ಹೊಂದಿದ್ದ ಸಾಫ್ಟವೇರ್ ಗಂಡಿಗೂ ಈಗ ಸುಲಭವಿಲ್ಲ.

        ಹೀಗಿರುವ ಸನ್ನಿವೇಶದಲ್ಲಿ ಮದುವೆ ’ವ್ಯವಹಾರ’ದ  ಚೌಕಾಶಿಯ ನಡುವೆ ಅಲ್ಪಸ್ವಲ್ಪ ಸ್ವಾನುಭವ ಪಡೆದ ಆಧಾರದ ಮೇಲೆ ಇತ್ತೀಚಿಗೆ ಹಾದುಹೋದ ಒಂದು ರಿಕ್ವೈರ್‌ಮೆಂಟ್‌ನ್ನು ಸ್ಯಾಂಪಲ್ಲಿಗಾಗಿ ಉಲ್ಲೇಖಿಸುವುದಾದರೆ - ತಂದೆ ತಾಯಿಯ ಒಬ್ಬನೇ ಮಗನಾಗಿರಬೇಕು ಆದರೆ ಮನೆಯಲ್ಲಿ ಅತ್ತೆಮಾವ(ಲಗೇಜು !) ಇರಬಾರದು, ಬೆಂಗಳೂರಿನಲ್ಲಿ ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಕೆಲಸದಲ್ಲಿರಬೇಕು. ಊರಿನಲ್ಲಿ ಮನೆ ಜಮೀನು ಇರಬೇಕು, ಆದರೆ ವಾಪಾಸು ಮನೆಗೆ ಹೋಗಿ ಜಮೀನು ಮತ್ತು ತಂದೆತಾಯಿರನ್ನು ನೋಡಿಕೊಂಡಿರುವ ವಿಷಯ ಎತ್ತಬಾರದು. ಬೆಂಗಳೂರಿನಲ್ಲಿ ಸೈಟು ಫ್ಲಾಟು ಮಾಡಬೇಕು!!

        ಇಂತಹ ಷರತ್ತುಗಳ, ಹೇಗೇಗಿರಬೇಕುಗಳ ಪಟ್ಟಿ ಮಾಡಿ ಓ ಹುಡುಗಿಯರೇ ನೀವೇಕೆ ಹೀಗೆ? ಎಂದು ಸವಾಲು ಹಾಕುವುದು ಇಲ್ಲಿ ಪ್ರಸ್ತುತವಾದರೂ ಅಪ್ರಯೋಜಕ ಮತ್ತು ಅಪೇಕ್ಷಣೀಯವಲ್ಲ. ಕಾರಣವಿಷ್ಟೇ. ತನಗೊಪ್ಪುವ ಸಂಗಾತಿಯೊಂದಿಗೆ ಬದುಕುವ, ತನಗೆ ಸರಿಯಾದ ವರನನ್ನು ವರಿಸುವುದು ವರಮಾಲೆ ಕೈಯಲ್ಲಿ ಹಿಡಿದ ಪ್ರತಿಯೊಬ್ಬ ವಧುವಿನ ಆಯ್ಕೆಗೆ, ಅವಳ ಹೆತ್ತವರ ಆಯ್ಕೆಗೆ ಬಿಟ್ಟ ವಿಷಯ. ಇಲ್ಲಿ ಸರಿತಪ್ಪುಗಳ ವಿಶ್ಲೇಷಣೆಗಿಂತ ಅವರವರ ಇಷ್ಟವನ್ನು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ. ಮೂರನೆಯ ವ್ಯಕ್ತಿ ಅದನ್ನು ಪ್ರಶ್ನಿಸತಕ್ಕದ್ದಲ್ಲ, ಅದಕ್ಕೆ ಆಕ್ಷೇಪಿಸತಕ್ಕದ್ದಲ್ಲ.

       ಆದರೂ ಇಂತಹ ’ಇರಬೇಕುಗಳ’ ಪಟ್ಟಿಯನ್ನು ಮುಂದಿಟ್ಟಿರುವ ಕನ್ಯಾಮಣಿ ಮತ್ತವರ ಹೆತ್ತವರು ಅರಸುತ್ತಿರುವುದೇನು? ಎಂದು ಪ್ರಶ್ನಿಸಿಕೊಳ್ಳುವುದು ಖಂಡಿತ ಅಸಾಧುವಲ್ಲ. ಸುಖೀ ಜೀವನಕ್ಕೆ ಆರ್ಥಿಕ ಸಂಪನ್ಮೂಲ, ನೌಕರಿ, ಸೌಕರ್ಯ ಸಾಧನಗಳು ಬೇಕು ನಿಜ. ಆದರೆ ಕೌಟುಂಬಿಕ ಜೀವನದ ಸುಖ ಸಂತೋಷಗಳನ್ನು ಕೇವಲ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿದೆಯೇ? ನಗರದ ಐಶಾರಾಮಿ ಬದುಕಿನ ದೊಡ್ಡಸ್ತಿಕೆ ಕೊನೆಯವರೆಗೆ ಸಾರ್ಥಕತೆಯ ಅನುಭವವನು ನೀಡಬಲ್ಲದೇ? ಸಂಬಂಧ ಬೆಳಸುವಲ್ಲಿ ಹಣ ಐಶ್ವರ್ಯ ಅಂತಸ್ತುಗಳೇ ಪ್ರಮುಖವಾದರೆ ಪರಿವಾರದಲ್ಲಿ ಪ್ರೀತಿ ಸ್ನೇಹಗಳಿಗೆಲ್ಲಿ ಜಾಗ. ಮದುವೆ ಅನುಕೂಲಕ್ಕೆ, ಗಂಡು ಅನೂಕೂಲಸ್ಥನಾಗಿದ್ದರೆ ಸಾಕೋ? ಅಥವಾ ಅನುರೂಪನಾಗಿರಬೇಕೋ? ಇದೆಲ್ಲದರ ಜೊತೆಗೆ ಹೆಣ್ಣು ಗಂಡಿನಂತೆಯೇ ಓರ್ವ ಜೀವಂತ ವ್ಯಕ್ತಿಯೇ ಹೊರತು ಹಣವಂತನಿಗೆ ಮಾರಾಟವಾಗಬಲ್ಲ ವಸ್ತುವಲ್ಲವಲ್ಲ.

       ಬದುಕು ಹಣ-ಸಂಪತ್ತಿನಿಂದ ತುಂಬಿ ತುಳುಕುತ್ತಿರಬೇಕೆಂದಿಲ್ಲ, ಆದರೆ ಸಮೃದ್ಧವಾಗಿರಬೇಕು-ಪ್ರೀತಿ ಆತ್ಮೀಯತೆಗಳಿಂದ, ನಾವು-ನಮ್ಮವರೆಂಬ ಆರ್ದ್ರ ಸಂಬಂಧಗಳಿಂದ, ಇತರರ ಸುಖ ದುಃಖಗಳಿಗೆ ಸಂವೇದನಶೀಲವಾದ ನಡವಳಿಕೆಯಿಂದ, ಮಕ್ಕಳು ಕಿರಿಯರನ್ನು ಸರಿಯಾದ ಮಾರ್ಗದಲ್ಲಿ ನಡೆಸಬಲ್ಲ ಕರ್ತವ್ಯ ನಿರ್ವಹಣೆಯಿಂದ, ಪ್ರಕೃತಿಯ ಅಗಾಧತೆಯಲ್ಲಿ ವಿಶಾಲತೆ ಗಳಿಸಬಲ್ಲ ಬುದ್ಧಿಯಿಂದ, ನಿಸರ್ಗದ ಸೊಬಗ ಸವಿಯಬಲ್ಲ, ಕಲೆ- ಕಾವ್ಯ- ಸಂಗೀತ- ಕ್ರೀಡೆ-ಹಣ್ಣು ಹಂಪಲು ತಿಂಡಿ ತಿನಿಸುಗಳನ್ನು ಆಸ್ವಾದಿಸಬಲ್ಲ ಸಹೃದಯತೆಯಿಂದ, ಜೀವನಪ್ರೀತಿಯಿಂದ.

     ಇನ್ನು ಇಂದಿನ ನಗರೀಕೃತ ಬದುಕಿನ ಆಕರ್ಷಣೆಯ ಪ್ರಭಾವದಲ್ಲಿ ಕಳೆದುಹೋಗಿರುವ ಹುಡುಗಿಯರನ್ನೇ ಉದ್ಧೇಶಿಸಿ ನೇರವಾದ ಮಾತೊಂದನ್ನು ಹೇಳುವುದಾದರೆ - ಕೃಷಿ ಅಥವಾ ಇನ್ನು ಯಾವುದೋ ವ್ಯವಹಾರವನ್ನು ಮಾಡುತ್ತ ತಂದೆ ತಾಯಿ ಬಳಗದೊಟ್ಟಿಗೆ ಊರಿನ ಸ್ವಂತ ಮನೆಯಲ್ಲಿರುವ ಹುಡುಗನೋ ಅಥವಾ ಉದ್ಯೋಗ ನಿಮಿತ್ತ ಬೆಂಗಳೂರಿನಂತಹ ಪಟ್ಟಣದೊಳಗೆ ನೆಲೆಸಿದ್ದರೂ ಊರಿನೆಡೆಗೆ ಸೆಳೆತ ಹೊಂದಿರುವ ಹುಡುಗನೂ ಗಂಡಸೇ! ನಿಜ, ಅವನು ಜೆಹಾದಿ ಸಾಬಿಯಂತೆ ಅರೇಬಿಯಾದಿಂದ ಆಮದಾದ ಸೆಂಟಿನ ಪರಿಮಳದಿಂದ ಸೆಳೆಯಲಾರ, 250 ಸಿಸಿಯ ಬೈಕಿನ ಎತ್ತರದ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಪಾರ್ಕು ಮಾಲುಗಳಿಗೆ ಓಡಾಡಿಸಲಾರ, ಯಾರೂ ಸುಳಿಯದ ಊರಹೊರಗಿನ ಕಲ್ಲುಬಂಡೆಯ ಮೇಲೆ ಮೈಬೆಚ್ಚಾಗಾಗುವಂತೆ ತಾಗಿ ಕುಳಿತು ಸರಸ ಸಲ್ಲಾಪ ನಡೆಸಲಾರ. ಉತ್ತರದ ಹಿಂದೀ ಪ್ರದೇಶದ ತರುಣನಂತೆ ಬಾಲಿವುಡ್ಡಿನ ಹಿಂದಿ ಹಾಡಿನ ಅಂತ್ಯಾಕ್ಷರಿ ಹಾಡಿ ಮನಮೋಹಿಸಲಾರ, ಮೊಬೈಲಿಗೆ ರೊಮ್ಯಾಂಟಿಕ್ ಆದ ಶಾಯಿರಿ ಎಸ್ಸೆಮ್ಮೆಸ್‌ಗಳನ್ನು ಕಳಿಸಿ ಬಣ್ಣದ ಮಾತುಗಳಲ್ಲೇ ತೇಲಿಸಲಾರ. ಮೆಟ್ರೋ ನಗರದಲ್ಲಿ ಬೆಳೆದ ಯುವಕನಂತೆ ಇಂಗ್ಲಿಷ್ ಸಿನಿಮಾದ ಕತೆಯನ್ನು ಹೇಳುತ್ತಲೋ, ಗಿಟಾರಿನ ಒಂದೇ ತಂತಿಯನ್ನು ಮೀಟುತ್ತ ತಲೆಯನ್ನು ಜಾಸ್ತಿಯೇ ಅಲ್ಲಾಡಿಸಿ ರಾಕ್ ಮ್ಯೂಸಿಕ್ಕಿನ ಟ್ಯೂನನ್ನು ಗುನುಗುನಿಸಿ ಇಂಗ್ಲೀಷಿನಲ್ಲಿ ಪಟಪಟನೆ ಮಾತನಾಡಿ ಬೀಳಿಸಿಲಾರ. ಅಸಾಧ್ಯವೆಂದಲ್ಲ, ಅಸಕ್ತಿಯಿಲ್ಲ ಅಷ್ಟೇ. ಆದರೆ ನೆನಪಿರಲಿ ಗ್ರಾಮ್ಯಮನದ ಹುಡುನಲ್ಲಿಯೂ ಪ್ರೇಮಿಸಬಲ್ಲ ಹೃದಯವಿದೆ. ಸಂಸಾರದ ಸಂಕಷ್ಟಗಳಲ್ಲಿ ಭದ್ರತೆ ನೀಡಬಲ್ಲ ಸಾಮರ್ಥ್ಯವಿದೆ, ಬಾಳಕೊನೆಯವರೆಗೆ ಜೊತೆಯಾಗಿ ನಡೆಯಬಲ್ಲ ಮನವಿದೆ.

       ಎಲ್ಲರೂ ಹೀಗೆಂದಲ್ಲ. ಜೀವನಪ್ರೀತಿಯ ಪ್ರತಿಬಿಂಬದಂತಿರುವ, ಕುಟುಂಬದ ಜನರ ನಡುವಿನ ಕೊಂಡಿಯಂತೆ ಹಲವು ಸಂಕಷ್ಟಗಳ ನಡುವೆಯೂ ಆದರ್ಶ ದಾಂಪತ್ಯ ಜೀವನ ನಡೆಸುತ್ತಿರುವ ಅನೇಕ ಸೋದರಿಯರ, ಮಾತೆಯರ ಉದಾಹರಣೆಗಳನ್ನು ನಮ್ಮ ಸುತ್ತಲೇ ಕಾಣಬಹದು. ಪ್ರೇಮಕವಿಯೆಂದೇ ಪ್ರಸಿದ್ಧರಾಗಿದ್ದ ಕೆ ಎಸ್ ನರಸಿಂಹಸ್ವಾಮಿಯವರ ಒಂದು ಸುಂದರ ಕವನ ’ನೀವಲ್ಲವೇ?’ ’ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ’ ಎಂದು ಪ್ರಾರಂಭವಾಗುವ ಈ ಕವನದಲ್ಲಿ ಒಲ್ಮೆಯ ದಾಂಪತ್ಯದಲ್ಲಿ ಸಾರ್ಥಕ್ಯ ಕಾಣುತ್ತಿರುವ ಹೆಂಡತಿ ತನ್ನ ಗಂಡನನ್ನು ವರ್ಣಿಸುವುದನ್ನು ಕವಿ ಸುಂದರ ಸಾಲುಗಳಲ್ಲಿ ಪೋಣಿಸಿದ್ದಾರೆ. ಅದರ ಕೊನೆಯ ಚರಣದ ಕೊನೆಯ ಸಾಲು ಹೀಗಿದೆ ’ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ ಪಯಣದಲಿ ಜೊತೆಯಾಗಿ ನಾನಿಲ್ಲವೇ?’ ನರಸಿಂಹಸ್ವಾಮಿಯವರಿಗೆನೋ ಬಾಳಪಯಣದಲ್ಲಿ ಜೊತೆಯಾಗಿ ವೆಂಕಮ್ಮನವರಿದ್ದರು. ಆದರೆ ನಾನು ನನ್ನಂತವರು . . . .? ಕಾದು ನೋಡಬೇಕು.

ಹಿಂದೂ ಹೃದಯ ಸಾಮ್ರಾಟನಾದ ಮರಾಠಿ ಮಾಣೂಸ್‌

 (ವಿಕ್ರಮ - 25 ಜನವರಿ 2026) ಸುದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ನಿರಂತರ ಸಕ್ರಿಯರಾಗಿದ್ದು, ಜೊತೆಗೆ ಪ್ರಸ್ತುತರೂ ಆಗಿದ್ದು ತಮ್ಮ ಬದುಕಿನ ನಂತರವೂ ಪ್ರಭಾವಿಯಾಗಿರು...