Thursday, May 7, 2015

ಓ ಹುಡುಗಿಯರೇ ನೀವೇಕೆ ಹೀಗೆ ?

          ಕೆಲವು ವರ್ಷಗಳ ಹಿಂದಿನ ಮಾತು. ನಾನು ಕೆಲಸ ಮಾಡುವ ಸಂಸ್ಥೆಗೆ ಬಂದಿದ್ದ ಓರ್ವ ಅಮೇರಿಕದ ಕ್ಲೈಂಟ್ನೊಟ್ಟಿಗೆ ಊಟಕ್ಕೆ ಕುಳಿತಿದ್ದಾಗ ಮಾತು ಕುಟುಂಬ ಮದುವೆಗಳ ಕಡೆಗೆ ಹೊರಳಿತ್ತು. ಈಗಾಗಲೆ ಎರಡು ಮೂರು ಮದುವೆಯಾಗಿ ವಿಚ್ಛೇದನವೂ ಆಗಿ ಹೊಸ ಗರ್ಲ್ಫ್ರೆಂಡ್ ಒಟ್ಟಿಗೆ ಮುಂದಿನ ಮದುವೆಯ ಯೋಜನೆಗೆ ತೊಡಗಿದ್ದ ಆತ ಕೇಳಿದ್ದಭಾರತದಲ್ಲಿ ಯಾಕೆ ಮದುವೆಗಳು ಅಷ್ಟು ಮುರಿದು ಬೀಳುವುದಿಲ್ಲ?’ (why marriages last so long in India and will not breakup much?). ಆತನಿಗೆ ಅದೊಂದು ವಿಸ್ಮಯವಾಗಿತ್ತು. ಅಂದು ಸಹೋದ್ಯೋಗಿಯೊಬ್ಬರು ನೀಡಿದ್ದ ಉತ್ತರ ತುಂಬ ಸೂಕ್ತವಾಗಿತ್ತು. ಭಾರತದಲ್ಲಿ ಮದುವೆಗಳು ನಡೆಯುವುದು ಕೇವಲ ಗಂಡು ಹೆಣ್ಣು ಇಬ್ಬರ ನಡುವೆ ಮಾತ್ರವಲ್ಲ. ವಿವಾಹ ಎರಡು ಕುಟುಂಬಗಳ ನಡುವೆ, ಎರಡು ಪರಿವಾರಗಳ ನಡುವೆ ಸಂಬಂಧವನ್ನು ಬೆಸೆಯುತ್ತದೆ. (marriage builds relation between two families). ಇದು ನಮ್ಮ ಅನುಭವ. ಕನ್ಯಾ ವರಯತೇ ರೂಪಮ್ ಮಾತಾ ವಿತ್ತಂ ಪಿತಾ ಶ್ರುತಮ್| ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮ್ ಇತರೇ ಜನಾಃ|| - ವಧುವು ಹುಡುಗನ ರೂಪವನ್ನೂ, ವಧುವಿನ ತಾಯಿಯು ಸಂಪತ್ತನ್ನು ನೋಡಿದರೂ ತಂದೆಯಾದವನು ವರನ ಗುಣಾವಗುಣಗಳು, ಕೌಟುಂಬಿಕ ಹಿನ್ನೆಲೆಗಳ ಬಗ್ಗೆ ಜನರು ಹೇಳುವುದನ್ನು ಮತ್ತು ಬಂಧುವರ್ಗದವರು ಕುಲ ಪರಿವಾರಗಳನ್ನು ಮಹತ್ತೆಂದು ನೋಡುತ್ತಾರೆ ಎನ್ನುವಲ್ಲಿ ನಮ್ಮಲ್ಲಿ ವೈವಾಹಿಕ ಸಂಬಂಧವನ್ನು ಬೆಳೆಸುವಲ್ಲಿನ ಮಾನದಂಡದ ಅರಿವಾಗುತ್ತದೆ. ಹಾಗೇಯೇ ಗುಣಮ್ ಪೃಚ್ಛಸ್ವ ಮಾ ರೂಪಮ್ ಶೀಲಮ್ ಪೃಚ್ಛಸ್ವ ಮಾ ಕುಲಮ್ ಸಿದ್ಧಿಮ್ ಪೃಚ್ಛಸ್ವ ಮಾ ವಿದ್ಯಾಮ್ ಸುಖಮ್ ಪೃಚ್ಛಸ್ವ ಮಾ ಧನಮ್ ಎನ್ನುವ ಸುಭಾಷಿತದಲ್ಲಿ ಹೇಳುವಂತೆ ರೂಪಕ್ಕಿಂತ ಆತನ ಗುಣ, ಕುಲಕ್ಕಿಂತ ಆತನ ನಡತೆ, ವಿದ್ಯೆಗಿಂತ ಆತ ಗಳಿಸಿದ ಸಿದ್ಧಿ, ವಿದ್ಯೆಯನ್ನು ವಿನಿಯೋಗಿಸಬಲ್ಲ ಕ್ಷಮತೆ, ಧನಸಂಪತ್ತಿಗಿಂತ ಮಿಗಿಲಾಗಿ ಆತನ ಜೀವನ ಸುಖ ಇವು ಒಬ್ಬ ವ್ಯಕ್ತಿಯನ್ನು ಅಳೆಯಬಲ್ಲ ಸೂಕ್ತ ಅಳತೆಗೋಲುಗಳು. ರೀತಿಯ ಮಾನದಂಡಗಳಿಂದ ವರಸಾಮ್ಯ ಗುಣದೋಷಗಳನ್ನು ಗ್ರಹಿಬಲ್ಲ ಹಿರಿಯರಿಂದ ನಿಶ್ಚಯವಾಗಿ ಪರದೆ ಸರಿಯುವವರೆಗೂ ಒಬ್ಬರನ್ನೊಬ್ಬರು ಮುಖವನ್ನೂ ನೋಡಿರದ ಗಂಡು-ಹೆಣ್ಣುಗಳ ವೈವಾಹಿಕ ಸಂಬಂಧಗಳು ಬಹುತೇಕ ಸುಖೀ ದಾಂಪತ್ಯವಾಗುವುದು ನಮ್ಮ ನಡುವಿನ ಸಮಾಜದಲ್ಲಿ ಸಹಜವಾಗಿತ್ತು.

         ಆದರೆ ಕಾಲಾಚಾರಗಳು ಬದಲಾಗಿವೆ. ಕಾಲೇ ಕಾಲೇ ನವಾಚಾರಃ ನವಾ ವಾಣೀ ಮುಖೇ ಮುಖೇ ಎನ್ನುವಂತೆ ಆಚಾರಗಳೂ ಬದಲಾಗಿವೆ, ಬದಲಾಗತಕ್ಕದ್ದೇ, ಅದು ಪ್ರಕೃತಿಯ ನಿಯಮ. ಇಂದಿನ ಕಾಲದಲ್ಲಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಸಾಮಾನ್ಯವಾಗಿ ಇದೆ, ಅದರಲ್ಲೂ ಹುಡುಗಿಯರಿಗೆ ಸ್ವಲ್ಪ ಜಾಸ್ತಿಯೇ ಇದೆ. ಜೊತೆಗೆ ಕೆಲವು ಸಮುದಾಯಗಳಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಕಡಿಮೆಯಿದೆ ಎಂಬ ಸ್ವಲ್ಪ ವಾಸ್ತವ ಆದರೆ ಹೆಚ್ಚಿನ ಗುಲ್ಲು ಹಬ್ಬಿದಾಗಿನಿಂದ ಹುಡುಗಿಯರ ಆಯ್ಕೆಯ ಸ್ವಾತಂತ್ರ್ಯದ ವ್ಯಾಪ್ತಿ  ಹಿಗ್ಗಿದ್ದಷ್ಟೇ ಅಲ್ಲ ಆಯ್ಕೆ ಚೌಕಾಶಿಯ ವ್ಯವಹಾರದ ಮಟ್ಟಕ್ಕೆ ಇಳಿದಿದೆಯೆಂದರೆ ಅತಿಶಯೋಕ್ತಿಯೇನೂ ಅಲ್ಲ. ಗಂಡನ್ನುಆರಿಸುವಾಗ ಹೇಗೇಗಿರಬೇಕು ಏನೇನಿರಬೇಕು ಎಂದು ಹುಡುಗಿಯೋ ಅವಳ ಹೆತ್ತವರೋ ಮುಂದಿಡುವ ಕಂಡೀಶನ್ನುಗಳು ಕಳವಳಕಾರಿಯಾದರೂ ಕೇಳಲೂ ಬಹಳ ಮಜವಾಗಿವೆ. ಕೃಷಿ ಕೆಲಸ ಮಾಡುತ್ತ ಅಥವಾ ಇನ್ನು ಯಾವುದೋ ವ್ಯವಹಾರ ಮಾಡುತ್ತ ಊರಿನ ಕಡೆ ಮನೆಯಲ್ಲಿ ತಂದೆತಾಯಿಯರೊಡನೆ ತುಂಬು ಕುಟುಂಬದಲ್ಲಿ(?) ವಾಸವಾಗಿರುವ ಮಾಣಿಗೆ ಹೆಣ್ಣು ಸಿಗುವುದಿಲ್ಲ ಎನ್ನುವುದು ಬಹಳ ಹಳೆಯ ವಿಚಾರವಾಯಿತು. ಕೆಲವು ವರ್ಷಗಳ ಕೆಳಗೆ ಸ್ಟಾರ್ ವ್ಯಾಲ್ಯೂ ಹೊಂದಿದ್ದ ಸಾಫ್ಟವೇರ್ ಗಂಡಿಗೂ ಈಗ ಸುಲಭವಿಲ್ಲ.

        ಹೀಗಿರುವ ಸನ್ನಿವೇಶದಲ್ಲಿ ಮದುವೆವ್ಯವಹಾರ  ಚೌಕಾಶಿಯ ನಡುವೆ ಅಲ್ಪಸ್ವಲ್ಪ ಸ್ವಾನುಭವ ಪಡೆದ ಆಧಾರದ ಮೇಲೆ ಇತ್ತೀಚಿಗೆ ಹಾದುಹೋದ ಒಂದು ರಿಕ್ವೈರ್ಮೆಂಟ್ನ್ನು ಸ್ಯಾಂಪಲ್ಲಿಗಾಗಿ ಉಲ್ಲೇಖಿಸುವುದಾದರೆ - ತಂದೆ ತಾಯಿಯ ಒಬ್ಬನೇ ಮಗನಾಗಿರಬೇಕು ಆದರೆ ಮನೆಯಲ್ಲಿ ಅತ್ತೆಮಾವ(ಲಗೇಜು !) ಇರಬಾರದು, ಬೆಂಗಳೂರಿನಲ್ಲಿ ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಕೆಲಸದಲ್ಲಿರಬೇಕು. ಊರಿನಲ್ಲಿ ಮನೆ ಜಮೀನು ಇರಬೇಕು, ಆದರೆ ವಾಪಾಸು ಮನೆಗೆ ಹೋಗಿ ಜಮೀನು ಮತ್ತು ತಂದೆತಾಯಿರನ್ನು ನೋಡಿಕೊಂಡಿರುವ ವಿಷಯ ಎತ್ತಬಾರದು. ಬೆಂಗಳೂರಿನಲ್ಲಿ ಸೈಟು ಫ್ಲಾಟು ಮಾಡಬೇಕು!!

        ಇಂತಹ ಷರತ್ತುಗಳ, ಹೇಗೇಗಿರಬೇಕುಗಳ ಪಟ್ಟಿ ಮಾಡಿ ಹುಡುಗಿಯರೇ ನೀವೇಕೆ ಹೀಗೆ? ಎಂದು ಸವಾಲು ಹಾಕುವುದು ಇಲ್ಲಿ ಪ್ರಸ್ತುತವಾದರೂ ಅಪ್ರಯೋಜಕ ಮತ್ತು ಅಪೇಕ್ಷಣೀಯವಲ್ಲ. ಕಾರಣವಿಷ್ಟೇ. ತನಗೊಪ್ಪುವ ಸಂಗಾತಿಯೊಂದಿಗೆ ಬದುಕುವ, ತನಗೆ ಸರಿಯಾದ ವರನನ್ನು ವರಿಸುವುದು ವರಮಾಲೆ ಕೈಯಲ್ಲಿ ಹಿಡಿದ ಪ್ರತಿಯೊಬ್ಬ ವಧುವಿನ ಆಯ್ಕೆಗೆ, ಅವಳ ಹೆತ್ತವರ ಆಯ್ಕೆಗೆ ಬಿಟ್ಟ ವಿಷಯ. ಇಲ್ಲಿ ಸರಿತಪ್ಪುಗಳ ವಿಶ್ಲೇಷಣೆಗಿಂತ ಅವರವರ ಇಷ್ಟವನ್ನು ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ. ಮೂರನೆಯ ವ್ಯಕ್ತಿ ಅದನ್ನು ಪ್ರಶ್ನಿಸತಕ್ಕದ್ದಲ್ಲ, ಅದಕ್ಕೆ ಆಕ್ಷೇಪಿಸತಕ್ಕದ್ದಲ್ಲ.

       ಆದರೂ ಇಂತಹಇರಬೇಕುಗಳಪಟ್ಟಿಯನ್ನು ಮುಂದಿಟ್ಟಿರುವ ಕನ್ಯಾಮಣಿ ಮತ್ತವರ ಹೆತ್ತವರು ಅರಸುತ್ತಿರುವುದೇನು? ಎಂದು ಪ್ರಶ್ನಿಸಿಕೊಳ್ಳುವುದು ಖಂಡಿತ ಅಸಾಧುವಲ್ಲ. ಸುಖೀ ಜೀವನಕ್ಕೆ ಆರ್ಥಿಕ ಸಂಪನ್ಮೂಲ, ನೌಕರಿ, ಸೌಕರ್ಯ ಸಾಧನಗಳು ಬೇಕು ನಿಜ. ಆದರೆ ಕೌಟುಂಬಿಕ ಜೀವನದ ಸುಖ ಸಂತೋಷಗಳನ್ನು ಕೇವಲ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿದೆಯೇ? ನಗರದ ಐಶಾರಾಮಿ ಬದುಕಿನ ದೊಡ್ಡಸ್ತಿಕೆ ಕೊನೆಯವರೆಗೆ ಸಾರ್ಥಕತೆಯ ಅನುಭವವನು ನೀಡಬಲ್ಲದೇ? ಸಂಬಂಧ ಬೆಳಸುವಲ್ಲಿ ಹಣ ಐಶ್ವರ್ಯ ಅಂತಸ್ತುಗಳೇ ಪ್ರಮುಖವಾದರೆ ಪರಿವಾರದಲ್ಲಿ ಪ್ರೀತಿ ಸ್ನೇಹಗಳಿಗೆಲ್ಲಿ ಜಾಗ. ಮದುವೆ ಅನುಕೂಲಕ್ಕೆ, ಗಂಡು ಅನೂಕೂಲಸ್ಥನಾಗಿದ್ದರೆ ಸಾಕೋ? ಅಥವಾ ಅನುರೂಪನಾಗಿರಬೇಕೋ? ಇದೆಲ್ಲದರ ಜೊತೆಗೆ ಹೆಣ್ಣು ಗಂಡಿನಂತೆಯೇ ಓರ್ವ ಜೀವಂತ ವ್ಯಕ್ತಿಯೇ ಹೊರತು ಹಣವಂತನಿಗೆ ಮಾರಾಟವಾಗಬಲ್ಲ ವಸ್ತುವಲ್ಲವಲ್ಲ.

       ಬದುಕು ಹಣ-ಸಂಪತ್ತಿನಿಂದ ತುಂಬಿ ತುಳುಕುತ್ತಿರಬೇಕೆಂದಿಲ್ಲ, ಆದರೆ ಸಮೃದ್ಧವಾಗಿರಬೇಕು-ಪ್ರೀತಿ ಆತ್ಮೀಯತೆಗಳಿಂದ, ನಾವು-ನಮ್ಮವರೆಂಬ ಆರ್ದ್ರ ಸಂಬಂಧಗಳಿಂದ, ಇತರರ ಸುಖ ದುಃಖಗಳಿಗೆ ಸಂವೇದನಶೀಲವಾದ ನಡವಳಿಕೆಯಿಂದ, ಮಕ್ಕಳು ಕಿರಿಯರನ್ನು ಸರಿಯಾದ ಮಾರ್ಗದಲ್ಲಿ ನಡೆಸಬಲ್ಲ ಕರ್ತವ್ಯ ನಿರ್ವಹಣೆಯಿಂದ, ಪ್ರಕೃತಿಯ ಅಗಾಧತೆಯಲ್ಲಿ ವಿಶಾಲತೆ ಗಳಿಸಬಲ್ಲ ಬುದ್ಧಿಯಿಂದ, ನಿಸರ್ಗದ ಸೊಬಗ ಸವಿಯಬಲ್ಲ, ಕಲೆ- ಕಾವ್ಯ- ಸಂಗೀತ- ಕ್ರೀಡೆ-ಹಣ್ಣು ಹಂಪಲು ತಿಂಡಿ ತಿನಿಸುಗಳನ್ನು ಆಸ್ವಾದಿಸಬಲ್ಲ ಸಹೃದಯತೆಯಿಂದ, ಜೀವನಪ್ರೀತಿಯಿಂದ.

     ಇನ್ನು ಇಂದಿನ ನಗರೀಕೃತ ಬದುಕಿನ ಆಕರ್ಷಣೆಯ ಪ್ರಭಾವದಲ್ಲಿ ಕಳೆದುಹೋಗಿರುವ ಹುಡುಗಿಯರನ್ನೇ ಉದ್ಧೇಶಿಸಿ ನೇರವಾದ ಮಾತೊಂದನ್ನು ಹೇಳುವುದಾದರೆ - ಕೃಷಿ ಅಥವಾ ಇನ್ನು ಯಾವುದೋ ವ್ಯವಹಾರವನ್ನು ಮಾಡುತ್ತ ತಂದೆ ತಾಯಿ ಬಳಗದೊಟ್ಟಿಗೆ ಊರಿನ ಸ್ವಂತ ಮನೆಯಲ್ಲಿರುವ ಹುಡುಗನೋ ಅಥವಾ ಉದ್ಯೋಗ ನಿಮಿತ್ತ ಬೆಂಗಳೂರಿನಂತಹ ಪಟ್ಟಣದೊಳಗೆ ನೆಲೆಸಿದ್ದರೂ ಊರಿನೆಡೆಗೆ ಸೆಳೆತ ಹೊಂದಿರುವ ಹುಡುಗನೂ ಗಂಡಸೇ! ನಿಜ, ಅವನು ಜೆಹಾದಿ ಸಾಬಿಯಂತೆ ಅರೇಬಿಯಾದಿಂದ ಆಮದಾದ ಸೆಂಟಿನ ಪರಿಮಳದಿಂದ ಸೆಳೆಯಲಾರ, 250 ಸಿಸಿಯ ಬೈಕಿನ ಎತ್ತರದ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಪಾರ್ಕು ಮಾಲುಗಳಿಗೆ ಓಡಾಡಿಸಲಾರ, ಯಾರೂ ಸುಳಿಯದ ಊರಹೊರಗಿನ ಕಲ್ಲುಬಂಡೆಯ ಮೇಲೆ ಮೈಬೆಚ್ಚಾಗಾಗುವಂತೆ ತಾಗಿ ಕುಳಿತು ಸರಸ ಸಲ್ಲಾಪ ನಡೆಸಲಾರ. ಉತ್ತರದ ಹಿಂದೀ ಪ್ರದೇಶದ ತರುಣನಂತೆ ಬಾಲಿವುಡ್ಡಿನ ಹಿಂದಿ ಹಾಡಿನ ಅಂತ್ಯಾಕ್ಷರಿ ಹಾಡಿ ಮನಮೋಹಿಸಲಾರ, ಮೊಬೈಲಿಗೆ ರೊಮ್ಯಾಂಟಿಕ್ ಆದ ಶಾಯಿರಿ ಎಸ್ಸೆಮ್ಮೆಸ್ಗಳನ್ನು ಕಳಿಸಿ ಬಣ್ಣದ ಮಾತುಗಳಲ್ಲೇ ತೇಲಿಸಲಾರ. ಮೆಟ್ರೋ ನಗರದಲ್ಲಿ ಬೆಳೆದ ಯುವಕನಂತೆ ಇಂಗ್ಲಿಷ್ ಸಿನಿಮಾದ ಕತೆಯನ್ನು ಹೇಳುತ್ತಲೋ, ಗಿಟಾರಿನ ಒಂದೇ ತಂತಿಯನ್ನು ಮೀಟುತ್ತ ತಲೆಯನ್ನು ಜಾಸ್ತಿಯೇ ಅಲ್ಲಾಡಿಸಿ ರಾಕ್ ಮ್ಯೂಸಿಕ್ಕಿನ ಟ್ಯೂನನ್ನು ಗುನುಗುನಿಸಿ ಇಂಗ್ಲೀಷಿನಲ್ಲಿ ಪಟಪಟನೆ ಮಾತನಾಡಿ ಬೀಳಿಸಿಲಾರ. ಅಸಾಧ್ಯವೆಂದಲ್ಲ, ಅಸಕ್ತಿಯಿಲ್ಲ ಅಷ್ಟೇ. ಆದರೆ ನೆನಪಿರಲಿ ಗ್ರಾಮ್ಯಮನದ ಹುಡುನಲ್ಲಿಯೂ ಪ್ರೇಮಿಸಬಲ್ಲ ಹೃದಯವಿದೆ. ಸಂಸಾರದ ಸಂಕಷ್ಟಗಳಲ್ಲಿ ಭದ್ರತೆ ನೀಡಬಲ್ಲ ಸಾಮರ್ಥ್ಯವಿದೆ, ಬಾಳಕೊನೆಯವರೆಗೆ ಜೊತೆಯಾಗಿ ನಡೆಯಬಲ್ಲ ಮನವಿದೆ.

       ಎಲ್ಲರೂ ಹೀಗೆಂದಲ್ಲ. ಜೀವನಪ್ರೀತಿಯ ಪ್ರತಿಬಿಂಬದಂತಿರುವ, ಕುಟುಂಬದ ಜನರ ನಡುವಿನ ಕೊಂಡಿಯಂತೆ ಹಲವು ಸಂಕಷ್ಟಗಳ ನಡುವೆಯೂ ಆದರ್ಶ ದಾಂಪತ್ಯ ಜೀವನ ನಡೆಸುತ್ತಿರುವ ಅನೇಕ ಸೋದರಿಯರ, ಮಾತೆಯರ ಉದಾಹರಣೆಗಳನ್ನು ನಮ್ಮ ಸುತ್ತಲೇ ಕಾಣಬಹದು. ಪ್ರೇಮಕವಿಯೆಂದೇ ಪ್ರಸಿದ್ಧರಾಗಿದ್ದ ಕೆ ಎಸ್ ನರಸಿಂಹಸ್ವಾಮಿಯವರ ಒಂದು ಸುಂದರ ಕವನನೀವಲ್ಲವೇ?’ ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ ಎಂದು ಪ್ರಾರಂಭವಾಗುವ ಕವನದಲ್ಲಿ ಒಲ್ಮೆಯ ದಾಂಪತ್ಯದಲ್ಲಿ ಸಾರ್ಥಕ್ಯ ಕಾಣುತ್ತಿರುವ ಹೆಂಡತಿ ತನ್ನ ಗಂಡನನ್ನು ವರ್ಣಿಸುವುದನ್ನು ಕವಿ ಸುಂದರ ಸಾಲುಗಳಲ್ಲಿ ಪೋಣಿಸಿದ್ದಾರೆ. ಅದರ ಕೊನೆಯ ಚರಣದ ಕೊನೆಯ ಸಾಲು ಹೀಗಿದೆ ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ ಪಯಣದಲಿ ಜೊತೆಯಾಗಿ ನಾನಿಲ್ಲವೇ?ನರಸಿಂಹಸ್ವಾಮಿಯವರಿಗೆನೋ ಬಾಳಪಯಣದಲ್ಲಿ ಜೊತೆಯಾಗಿ ವೆಂಕಮ್ಮನವರಿದ್ದರು. ಆದರೆ ನಾನು ನನ್ನಂತವರು . . . .? ಕಾದು ನೋಡಬೇಕು.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...