Tuesday, May 13, 2014

ಮುಗಿಯಿತು ರಜೆ....! ಹೋಗೋಣ ಶಾಲೆಗೆ


(ಪುಂಗವ, 15/05/2014)

         ಯಾವುದೇ ಸಮಾಜದ ಭಾವೀ ಪೀಳಿಗೆಯನ್ನು ರೂಪಿಸುವಲ್ಲಿ ಮೂಲಭೂತ ಶಿಕ್ಷಣದ ಪಾತ್ರ ಅತ್ಯಮೂಲ್ಯವಾದುದು. ಅದರಲ್ಲೂ ಪ್ರಾಥಮಿಕ ವಿದ್ಯಾಭ್ಯಾಸ ನಿರ್ಮಿಸುವ ಬುನಾದಿಯು ಮಗುವೊಂದರ ಭವಿಷ್ಯದ ನಿರ್ಣಾಯಕವಾಗುವುದು. ಆದ್ದರಿಂದ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಚಿಂತನೆ ನಡೆಸುವುದು ಯಾವುದೇ ಸಜ್ಜನ ಸಮಾಜದಲ್ಲಿ ಸ್ವಾಭಾವಿಕವಾಗಿದೆ.

          ವಾರ್ಷಿಕ ಬೇಸಿಗೆ ರಜೆ ಮುಗಿದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಇನ್ನೇನು ಪುನರಾರಂಭಗೊಳ್ಳಲಿವೆ. ಈ ಸಂಧರ್ಭದಲ್ಲಿ ನಮ್ಮ ಮಕ್ಕಳ ವಿದ್ಯಾಭ್ಯಾಸ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಳವಳಿಡಿಸಿಕೊಳ್ಳಬಹುದಾದ ವಿಷಯಗಳು, ಶಾಲೆಗಳು ಮತ್ತು ಶಿಕ್ಷಣ ವ್ಯವಸ್ಥೆ, ಪೋಷಕರು ಹಾಗೂ ಸಮಾಜದ ಹೊಣೆಗಾರಿಕೆಯನ್ನು ಕುರಿತು ಕೆಲವು ಅಂಶಗಳನ್ನು ಗಮನಿಸುವುದೊಳಿತು.

ನಮ್ಮ ಮಕ್ಕಳು ನಮ್ಮ ಶಾಲೆ
                ಒಳ್ಳೆಯ ಹೆಸರುಳ್ಳ ವಿದ್ಯಾಸಂಸ್ಥೆಗೆ ಹೆಚ್ಚಿನ ಫೀ ತುಂಬಿ ಮಕ್ಕಳನ್ನು ದಾಖಲಾತಿ ಮಾಡಿದರೆ ತಮ್ಮ ಕೆಲಸ ಮುಗಿಯಿತು ಎಂದು ಅನೇಕ ಪೋಷಕರು ಅಂದುಕೊಳ್ಳುವುದುಂಟು. ಹಾಗೆಯೇ ಆರ್ಥಿಕ ಕಾರಣಗಳಿಂದ ಖಾಸಗೀ ಶಾಲೆಗೆ ಸೇರಿಸಲಾಗದೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕೆಂದು ದುಃಖಪಡುವ ತಂದೆತಾಯಿಯರೂ ಇದ್ದಾರೆ. ಉತ್ತಮ ಶಿಕ್ಷಣ ಪಡೆಯುವಲ್ಲಿ ಶಾಲೆಗಳ ಮಹತ್ವವಿರುವುದು ನಿಜವಾದರೂ ಖಾಸಗಿ ಶಾಲೆಗಳು ಮಾತ್ರ ಉತ್ತಮ, ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಶಿಕ್ಷಣ ದೊರಕುವುದಿಲ್ಲ ಎಂದು ನಿರ್ಧರಿಸಲಾಗುವುದಿಲ್ಲ. ಆದ್ದರಿಂದ ಶಾಲೆ ಯಾವುದೇ ಇರಲಿ ಪೋಷಕರಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಇರಬೇಕಾದದ್ದು ಅಗತ್ಯವಾಗಿದೆ. ಮಕ್ಕಳ ಪಠ್ಯಕ್ರಮದಲ್ಲಿ ಏನೇನಿದೆ ಎಂದು ಗಮನಿಸುವುದು, ಆಗಾಗ ಶಾಲೆಗೆ ಭೇಟಿಕೊಟ್ಟು ಶಿಕ್ಷಕ ವರ್ಗದವರಿಂದ ಮಾಹಿತಿ ಪಡೆಯುವುದು, ನಮ್ಮ ಮಕ್ಕಳ ಕಲಿಕಾ ಪ್ರಗತಿ ಹೇಗಿದೆ ಎಂದು ವಿಚಾರಿಸುವುದು, ಶಾಲೆಯಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳು ಹಾಗೂ ಅವುಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಹಿತಿ ಪಡೆಯುವುದು ಮುಂತಾದ ರೂಢಿಗಳನ್ನು ಪಾಲಕರು ಬೆಳೆಸಿಕೊಳ್ಳುವುದು ಉತ್ತಮ.

               ಶಾಲೆಗಳಲ್ಲಿ ಅಗತ್ಯ ಸೌಕರ್ಯಗಳ ಕೊರತೆಯಿಂದ ಶಿಕ್ಷಣದ ಗುಣಮಟ್ಟದಲ್ಲಿ ನ್ಯೂನತೆಯಾಗುವುದು ಸಹಜ, ಅದರಲ್ಲೂ ಗ್ರಾಮೀಣ ಪ್ರದೇಶಗಳ ಅನೇಕ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಈ ನ್ಯೂನತೆಯನ್ನು ನೀಗಿಸಲು ಪಾಲಕರು, ಊರಿನ ನಾಗರಿಕರು, ಹಳೆಯ ವಿದ್ಯಾರ್ಥಿಗಳು ಶಿಕ್ಷಕ ವೃಂದದೊಡನೆ ಕೈಜೋಡಿಸಬಹುದು. ಉದಾಹರಣೆಗೆ ಶಾಲೆಯಲ್ಲಿ ಒಂದು ಗ್ರಂಥಾಲಯವನ್ನು ಸ್ಥಾಪಿಸುವುದು, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಅತಿ ಕಡಿಮೆ ವೆಚ್ಚದ ವಿಜ್ಞಾನ ಪ್ರಯೋಗಾಲಯ ಇತ್ಯಾದಿಗಳನ್ನು ಸಣ್ಣ ಸಣ್ಣ ಮೊತ್ತದ ಕೊಡುಗೆಯಿಂದ ಜಾರಿಗೆ ತರಬಹುದು. ಈ ನಿಟ್ಟಿನಲ್ಲಿ ಸರ್ಕಾರವೂ ಕೂಡ ‘ಶಾಲೆಗಾಗಿ ನಾವು-ನೀವು’, ‘ಸಮುದಾಯದತ್ತ ಶಾಲೆ’ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ‘ಇದು ನಮ್ಮ ಶಾಲೆ’ ಎಂಬ ಅಭಿಮಾನ ಊರಿನ ನಾಗರಿಕರಲ್ಲಿ, ಪಾಲಕರಲ್ಲಿ, ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಮೂಡಬೇಕು. ಶಾಲೆ ಊರಿನ ಎಲ್ಲ ಸಾಂಸ್ಕøತಿಕ ಮತ್ತು ಶೈಕ್ಷಣಿಕ ವಿಚಾರಗಳ ಕೇಂದ್ರವಾಗಲಿ. 

ಜ್ಞಾನಾರ್ಜನೆಗಾಗಿ ಶಿಕ್ಷಣ
                ಇಂಗ್ಲೀಷ್ ಮಾಧ್ಯಮದ ವ್ಯಾಮೋಹ ಇತ್ತೀಚೆಗೆ ಅತಿಯಾಗಿ ಬೆಳೆಯುತ್ತಿದೆ. ಅಷ್ಟೇ ಅಲ್ಲದೇ ಶಾಲೆಯ ಹೊರಗೂ ಇಂಗ್ಲೀಷಿನಲ್ಲೇ ಮಾತನಾಡಬೇಕೆಂದು ಮಕ್ಕಳಿಗೆ ತಾಕೀತು ಮಾಡಲಾಗುತ್ತಿದೆ. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷಾ ಮಾಧ್ಯಮದಲ್ಲಿ ನೀಡುವುದರಿಂದ ಮಕ್ಕಳು ವಿಷಯಗಳನ್ನು ಸಹಜವಾಗಿ ಹಾಗೂ ಪರಿಣಾಮಕಾರಿಯಾಗಿ ಗ್ರಹಿಸಬಲ್ಲರು ಎಂದು ತಜ್ಞರ ಸಂಶೋಧನೆಗಳಿಂದ ಕಂಡುಬಂದಿದೆ. ಅಲ್ಲದೇ ಭಾಷೆಯೊಂದಿಗೆ ನಮ್ಮ ಸತ್ಸಂಪ್ರದಾಯ ಆಚರಣೆಗಳೂ ಜೋಡಿಕೊಂಡಿರುವುದರಿಂದ ಮಗುವಿಗೆ ಮಾತೃಭಾಷಾ ಮಾಧ್ಯಮದಿಂದ ಉತ್ತಮ ಸಂಸ್ಕಾರ ಲಭ್ಯವಾಗುತ್ತದೆ. ಇನ್ನೊಂದು ಬಹುಮುಖ್ಯ ಅಂಶವೆಂದರೆ ಭಾರತೀಯ ಭಾಷೆಗಳ ಚೌಕಟ್ಟು ತುಂಬಾ ವೈಜ್ಞಾನಿಕವಾಗಿದ್ದು ಯಾವುದೇ ಭಾಷೆಯನ್ನು ಅಧ್ಯಯನ ಮಾಡಿದರೂ ಇನ್ನೊಂದು ಭಾಷೆಯನ್ನು ಸುಲಭವಾಗಿ ಕಲಿಯಬಹುದು. ಆದ್ದರಿಂದ ಮಾತೃಭಾಷೆಯಲ್ಲಿ ಕಲಿತ ವಿದ್ಯಾರ್ಥಿಗೆ ಇಂಗ್ಲೀಷ್ ಕಲಿಕೆ ಕಷ್ಟವಾಗುವುದೇ ಇಲ್ಲ. ಇಂದಿನ ಬದುಕಿನಲ್ಲಿ ಇಂಗ್ಲೀಷ್ ಭಾಷಾಜ್ಞಾನ ಅತ್ಯಗತ್ಯವಾದರೂ ಮಕ್ಕಳು ಮಾತೃಭಾಷೆ ಮತ್ತು ಸಮೃದ್ಧ ಭಾರತೀಯ ಭಾಷಾ ಸಾಹಿತ್ಯಗಳಿಂದ ವಂಚಿತರಾಗಬಾರದು. 

                ಪಾಲಕರಾಗಲೀ ಶಿಕ್ಷಕರಾಗಲೀ ಮಕ್ಕಳ ಮೇಲೆ ಕಲಿಕೆಯಲ್ಲಿ ಒತ್ತಡ ಹಾಕಬಾರದು. ಮಕ್ಕಳಲ್ಲಿ ಕುತೂಹಲ ಮೂಡಿಸಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಬೇಕು. ಆಗ ಮಕ್ಕಳಲ್ಲಿ ಸಹಜವಾಗಿ ವಿಷಯಗಳನ್ನು ತಿಳಿಯುವ ಆಸಕ್ತಿ ಬೆಳೆಯುತ್ತದೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಶಿಕ್ಷಣ ಜ್ಞಾನಾರ್ಜನೆ ಮತ್ತು ವ್ಯಕ್ತಿ ವಿಕಾಸಕ್ಕಾಗಿಯೇ ಹೊರತು ಕೇವಲ ಮಾಕ್ರ್ಸ್ ಪಡೆಯಲು ಅಲ್ಲ.

ಓದಿನೊಂದಿಗೆ ಆಟವೂ ಇರಲಿ
                ಓದಿನ ಜೊತೆಗೆ ಆಟವೂ ಮಕ್ಕಳಿಗೆ ಅತೀ ಅವಶ್ಯ. ಆಟಗಳೂ ನಮ್ಮ ಮಕ್ಕಳ ಶಿಕ್ಷಣದ ಭಾಗವಾಗಲಿ. ಕೇವಲ ಮೊಬೈಲ್ ಕಂಪ್ಯೂಟರಿನ ಆಟಗಳಲ್ಲ, ಹೊರಗಡೆ ಮೈದಾನದಲ್ಲಿ ಮಕ್ಕಳು ಆಟವಾಡಬೇಕು. ಕ್ರಿಕೆಟ್‍ನಂತಹ ಜನಪ್ರಿಯ ಕ್ರೀಡಯೊಂದನ್ನೇ ಅಲ್ಲದೇ ಕಬಡ್ಡಿ, ಲಗೋರಿ, ಖೋಖೋ, ಗಿಲ್ಲೀದಂಡಾ ಮುಂತಾದ ನೂರಾರು ಆಟಗಳು ನಮ್ಮ ಮಕ್ಕಳ ಸಂಜೆಯ ದಿನಚರಿಯಲ್ಲಿ ಸೇರಲಿ. ನಮ್ಮ ನೆಲದಲ್ಲೇ ವಿಕಾಸಗೊಂಡ ಇಂತಹ ದೇಶಿಯ ಆಟಗಳು ಸದೃಢ ಹಾಗೂ ನಿರೋಗೀ ಶರೀರ ಮತ್ತು ಬೌದ್ಧಿಕ ವಿಕಾಸಕ್ಕೆ ತುಂಬಾ ಸಹಕಾರಿಯಾಗಿವೆ.

ಪರಿಸರದೊಂದಿಗೆ ಪಾಠ
                 ಆಟೋರಿಕ್ಷಾಗಳಲ್ಲೋ, ಚಿಕ್ಕ ವ್ಯಾನ್‍ಗಳಲ್ಲೋ ಅಥವಾ ತಂದೆತಾಯಿಯರ ದ್ವಿಚಕ್ರವಾಹನದಲ್ಲಿ ಕುಳಿತು ಮಕ್ಕಳು ಶಾಲೆಗೆ ತೆರಳುವುದನ್ನು ಸಾಮಾನ್ಯವಾಗಿ ಕಾಣಬಹುದು. ಹೆಚ್ಚೆಚ್ಚು ವಾಹನ ಸಂಚರಿಸುವ ನಗರಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಶಾಲೆಯು ಮನೆಯಿಂದ ದೂರದಲ್ಲಿದ್ದಾಗ ಇದು ಅನಿವಾರ್ಯವಾದರೂ, ಸಾಧ್ಯವಾದಷ್ಟು ಮಟ್ಟಿಗೆ ಕಾಲುನಡಿಗೆಯಲ್ಲಿ ಶಾಲೆಗಳಿಗೆ ಹೋಗಿಬಂದು ಮಾಡುವುದು ಉತ್ತಮ. ಏಕೆಂದರೆ ಈ ಸಮಯದಲ್ಲಿ ಮಕ್ಕಳು ಸಹಪಾಠಿಗಳೊಂದಿಗೆ ಮುಕ್ತವಾಗಿ ಬೆರೆಯಬಹುದು, ಪ್ರಕೃತಿಯನ್ನು ಗಮನಿಸಿ ಅನೇಕ ವಿಷಯಗಳನ್ನು ಗ್ರಹಿಸಬಹುದು, ಶಾಲೆಯಲ್ಲಿ ಓದಿದ ವಿಷಯಗಳನ್ನು ಪ್ರತ್ಯಕ್ಷ ಕಾಣಬಹುದು. ಕಂಪ್ಯೂಟರ್ ಎನಿಮೇಶನ್‍ಗಳಾಗಲೀ, ಟಿವಿ ವೀಡಿಯೋಗಳಾಗಲೀ ಪ್ರತ್ಯಕ್ಷಾನುಭವದ ಜ್ಞಾನವನ್ನು ನೀಡಲಾರವು. ಹಾಗೆಯೇ ಸಹಾಧ್ಯಾಯಿಗಳ ಒಡನಾಟವು ನೀಡುವ ಆನಂದವೂ ಪ್ರತಿಯೊಬ್ಬರ ಬಾಲ್ಯದ ನೆನಪುಗಳಾಗಿ ಅಚ್ಚಳಿಯದೇ ಉಳಿಯುವವು.

                  ಶಾಲೆಯ ಪಾಠ ಮುಗಿದ ನಂತರ ಹೋಂವರ್ಕ್ ಟ್ಯೂಶನ್‍ಗಳಲ್ಲೇ ಹೆಚ್ಚಿನ ಮಕ್ಕಳು ಬಂಧಿಸಲ್ಪಡುವುದನ್ನು ಕಾಣುತ್ತೇವೆ. ಅದರಲ್ಲೂ 10 ಮತ್ತು ಪಿಯುಸಿ ವಿದ್ಯಾರ್ಥಿಗಳಂತು ಅಕ್ಷರಶಃ ಕಟ್ಟಿಹಾಕಲ್ಪಡುತ್ತಾರೆ. ಕೆಲವೊಮ್ಮೆ ಉತ್ತಮ ಅಂಕಗಳಿಕೆ ಬವಿಷ್ಯದ ನಿರ್ಣಾಯಕವೆಂದು ಒಪ್ಪಬಹುದಾದರೂ ಅತಿಯಾದ ಒತ್ತಡದಿಂದ ವ್ಯತಿರಿಕ್ತ ಪರಿಣಾಮವಾಗುವುದೇ ಅಧಿಕ. ಆದ್ದರಿಂದ ವಿದ್ಯಾರ್ಜನೆಯ ನಡುವೆ ಒಂದು ಮಟ್ಟಿನ ಬಿಡುವೂ ಅತ್ಯಗತ್ಯ. ಮಕ್ಕಳು ಸಂಭಂಧಿಕರ ಮನೆಗಳಿಗೂ ಹೋಗಲಿ, ಜಾತ್ರೆ ಹಬ್ಬ ಹರಿದಿನಗಳ ಆಚರಣೆಯಲ್ಲೂ ಪಾಲ್ಗೊಳ್ಳಲಿ, ಎಲ್ಲರೊಡನೆ ಬೆರೆಯಲಿ. 

ಮನೆಯೂ ಪಾಠಶಾಲೆಯೇ
                ಸಂಜೆಹೊತ್ತಿಗೆ ಮನೆಯ ಹಿರಿಯರು ಕಿರಿಯರು ಒಟ್ಟಿಗೆ ಕೂತು ಬಾಯಿಪಾಠ ಹೇಳುವ, ಅಜ್ಜ-ಅಜ್ಜಿಯರ ಬಾಯಿಂದ ಕಥೆ ಕೇಳುವ, ಒಟ್ಟಿಗೆ ಭಜನೆ ಹಾಡುವ ಪದ್ಧತಿ ಬಹುತೇಕ ಮನೆಗಳಲ್ಲಿ ರೂಢಿಯಲ್ಲಿತ್ತು. ಆದರೆ ಬದುಕಿನ ಧಾವಂತ, ಟಿವಿ ಧಾರಾವಾಹಿ ರಾಜಕೀಯ ವಿದ್ಯಮಾನ ಸಮಾಚಾರ ಚರ್ಚೆಗಳ ಹಾವಳಿಗಳ ನಡುವೆ ಈ ರೂಢಿಗಳು ಗ್ರಾಮೀಣ ಪ್ರದೇಶಗಳಲ್ಲೂ ಕ್ರಮೇಣ ಮರೆಯಾಗುತ್ತಿವೆ. ಇಂತಹ ಪದ್ಧತಿಗಳು ಕಿರಿಯರಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಬೆಳೆಸುವುದರ ಜೊತೆಗೆ ಮನೆಮಂದಿಯಲ್ಲೂ ಪ್ರೀತಿ ಸಾಮರಸ್ಯವನ್ನು ಗಟ್ಟಿಗೊಳಿಸುವವು.

ಹವ್ಯಾಸಗಳೂ ಬೇಕು
             ಶಾಲಾ ಪಠ್ಯಕ್ರಮದ ಜೊತೆಗೆ ಮಕ್ಕಳು ತಮ್ಮ ತಮ್ಮ ಆಸಕ್ತಿಗನುಗುಣವಾಗಿ ಸಂಗೀತ, ಚಿತ್ರಕಲೆ, ಅಭಿನಯ, ಸಾಹಿತ್ಯವನ್ನು ಓದುವುದು ಮೊದಲಾದ ಹವ್ಯಾಸಗಳಲ್ಲಿ ತೊಡಗಲಿ. ಆದರೆ ಇವು ಮಕ್ಕಳ ಮೇಲೆ ಹೇರಿಕೆಯಾಗದಿರಲಿ. ಹವ್ಯಾಸಗಳು ಶಿಕ್ಷಣಕ್ಕೆ ಪೂರಕ ಮತ್ತು ಸಂಸ್ಕಾರವನ್ನು ನೀಡುವಂತಿರಬೇಕೆ ಹೊರತು ಪ್ರದರ್ಶನ ಅಥವಾ ತಂದೆತಾಯಿಗಳ ಹೆಗ್ಗಳಿಕೆಗಾಗಿರಬಾರದು. ಪಾಲಕರಿಗೆ ತಮ್ಮ ಮಕ್ಕಳ ಶಿಕ್ಷಣ, ಭವಿಷ್ಯ, ಬೆಳವಣಿಗೆಗಳ ಬಗ್ಗೆ ಕಾಳಜಿಯಿರಬೇಕು ನಿಜ. ಕಿರಿಯರಿಗೆ ತಂದೆತಾಯಿ ಮನೆಮಂದಿಯ ಮಮತೆ ವಾತ್ಸಲ್ಯಗಳು ಯಥೇಚ್ಛವಾಗಿ ಸಿಗಬೇಕು. ಆದರೆ ಪ್ರೀತಿವಾತ್ಸಲ್ಯಗಳು ಮೋಹವಾಗಬಾರದು, ಬಂಧನವಾಗಬಾರದು. 

ಆಚಾರ್ಯಾತ್ ಪಾದಮಾದತ್ತೇ ಪಾದಮ್ ಶಿಷ್ಯಸ್ವಮೇಧಯಾ| 
ಪಾದಮ್ ಸಬ್ರಹ್ಮಚಾರಿಭ್ಯಃ ಪಾದಮ್ ಕಾಲಕ್ರಮೇಣ ಚ||

ಶಿಷ್ಯನಾದವನು ಗುರುವಿನಿಂದ ಕಾಲುಭಾಗ ವಿದ್ಯೆಯನ್ನು ಪಡೆದರೆ, ಇನ್ನು ಕಾಲು ಭಾಗವನ್ನು ಸ್ವಯಂ ತನ್ನ ಚಿಂತನೆಯಿಂದಲೂ, ಮೂರನೇ ಕಾಲು ಭಾಗ ಜ್ಞಾನವನ್ನು ಸಹಪಾಠಿಗಳ ಒಡನಾಟದಿಂದಲೂ ಪಡೆಯುತ್ತಾನೆ. ಉಳಿದ ನಾಲ್ಕನೇ ಕಾಲುಭಾಗ ವಿದ್ಯೆಯು ಕಾಲಕ್ರಮೇಣ ಆತನಿಗೆ ಲಭ್ಯವಾಗುತ್ತದೆ.
           

             ಸ್ವಾಮಿ ವಿವೇಕಾನಂದರು ಹೇಳಿದಂತೆ “ಶಿಕ್ಷಣದ ಗುರಿ ಕೇವಲ ವೃತ್ತಿಪರ ಬದುಕಿಗೆ ನಮ್ಮನ್ನು ತಯಾರುಮಾಡುವುದಲ್ಲ. ಚಾರಿತ್ರ್ಯವಂತರನ್ನಾಗಿ ರೂಪಿಸಿ ಸ್ವಾವಲಂಬಿ ಬದುಕಿಗೆ ಅಣಿಗೊಳಿಸುವುದು. ಮಾನವನಲ್ಲಿ ಹುದುಗಿರುವ ಜ್ಞಾನವನ್ನು ಪ್ರಜ್ವಲಿಸುವಂತೆ ಮಾಡುವುದೇ ಶಿಕ್ಷಣ. ಇದು ವ್ಯಕ್ತಿಯನ್ನು ಪರಿಪೂರ್ಣತೆಯೆಡಗೆ ನಡೆಸುವ ಸಾಧನ.” 




No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...