Tuesday, May 13, 2014

ದೇಶದ ರಕ್ಷಣೆಗಾಗಿ ಆತ್ಮಾರ್ಪಣೆಗೈದ ವೀರಯೋಧರು

(ಪುಂಗವ, 15/05/2014)
          
       ವೀರಪರಂಪರೆಯ ಇತಿಹಾಸವುಳ್ಳ ಭಾರತೀಯ ಸೇನೆಯ ನಾಲ್ವರು ಯೋಧರು ಭಯೋತ್ಪಾದಕರಿಂದ ಗ್ರಸ್ತವಾದ ಜಮ್ಮು ಕಾಶ್ಮೀರದಲ್ಲಿ ಹೋರಾಡುತ್ತ ದೇಶದ ಘನತೆ ಮತ್ತು ಸಮಗ್ರತೆಯ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಘಟನೆ ಕಳೆದ ಏಪ್ರಿಲ್‍ನಲ್ಲಿ ನಡೆದಿದೆ.

ಮೇಜರ್ ಮುಕುಂದ ವರದರಾಜನ್ ಮತ್ತು ಸಿಪಾಯಿ ವಿಕ್ರಮ್ ಸಿಂಗ್
ಸಿಪಾಯಿ ವಿಕ್ರಮ್ ಸಿಂಗ್
     ದಕ್ಷಿಣ ಕಾಶ್ಮೀರದ ಶೋಪಿಯನ್ ಜಿಲ್ಲೆಯ ಮನೆಯೊಂದರಲ್ಲಿ ಅಡಗಿ ಕುಳಿತು ಚುನಾವಣೆಯ ಸಂಧರ್ಭದಲ್ಲಿ ದಂಗೆಯೆಬ್ಬಿಸುವ ಹುನ್ನಾರ ಹೊಂದಿದ್ದ ಹಿಜ್‍ಬುಲ್ ಮುಜಾಹಿದ್ದೀನ್‍ನ ಉಗ್ರರನ್ನು ಹುಡುಕಿ ತೆರವುಗೊಳಿಸುವ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದ್ದ 44 ರಾಷ್ಟ್ರೀಯ ರೈಫಲ್ಸ್ ಬಟಾಲಿಯನ್ ತಂಡದ ನೇತೃತ್ವವನ್ನು ವಹಿಸಿದ್ದವರು ಮೇಜರ್ ಮುಕುಂದ ವರದರಾಜನ್. ತಮ್ಮ ಜೀವದ ಹಂಗನ್ನು ತೊರೆದು ಸ್ಥಳೀಯರನ್ನು ಸ್ಥಳಾಂತರಿಸಿ ಕಾಪಾಡಿದ ಮೇಜರ್ ಮುಕುಂದ್‍ರ ತಂಡ ಸತತ 26 ಗಂಟೆಗಳು ನಡೆದ ಗುಂಡಿನ ಕಾಳಗದಲ್ಲಿ ಈರ್ವರು ಉಗ್ರರನ್ನು ಹೊಡೆದುರುಳಿಸಿತು. ಅಡಗಿ ಕುಳಿತಿದ್ದ ಮೂರನೇ ಉಗ್ರನನ್ನು ಮಟ್ಟಹಾಕಲು ಸ್ವಯಂ ಮೇಜರ್ ಮುಕುಂದ ಮತ್ತು ಸಿಪಾಯಿ ವಿಕ್ರಮ್ ಸಿಂಗ್ ಮುಂದಾದರು. ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡ ವಿಕ್ರಮ್ ಸಿಂಗ್ ಸ್ಥಳದಲ್ಲೇ ಕೊನೆಯುಸಿರೆದರೆ ತೀವ್ರವಾಗಿ ಗಾಯಗೊಂಡ ಹೊರತಾಗಿಯೂ ಆ ಭಯೋತ್ಪಾದನನ್ನು ಹೊಡೆದುರುಳಿಸುವವರೆಗೂ ಮೇಜರ್ ಮುಕುಂದ ಹೋರಾಡಿದರು. ಗಂಭೀರವಾಗಿ ಗಾಯಗೊಂಡ ಮೇಜರ್ ಮುಕುಂದ್ ವರದರಾಜನ್ ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ಏಪ್ರಿಲ್ 27ರಂದು ವೀರಗತಿಯನ್ನು ಪಡೆದರು.

ಮೇಜರ್ ಮುಕುಂದ ವರದರಾಜನ್
“ಮೂರನೇ ವರ್ಷ ವಯಸ್ಸಿನಿಂದಲೇ ಅವನಿಗೆ ಸೈನ್ಯ ಸೇರಿ ಹೋರಾಡುವ ಹುಚ್ಚಿತ್ತು. ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ ನಿಜ, ಆದರೆ ಅವನು ದೇಶಕ್ಕೋಸ್ಕರ ತನ್ನ ಪ್ರಾಣಾರ್ಪಣೆ ಮಾಡಿದ್ದಾನೆಂಬ ಹೆಮ್ಮೆ ನನಗಿದೆ.”

ಆರ್ ವರದರಾಜನ್ 
ದಕ್ಷಿಣ ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ 
ಭಯೋತ್ಪಾದಕರೊಡನೆ ಹೋರಾಡುತ್ತ ಪ್ರಾಣಾರ್ಪಣೆಗೈದ 
ಮೇಜರ್ ಮುಕುಂದ ವರದರಾಜನ್ ಅವರ ತಂದೆ

          


ತಮಿಳುನಾಡು ಮೂಲದ ಮೇಜರ್ ಮುಕುಂದ ವರದರಾಜನ್ ಜರ್ನಲಿಸಂನಲ್ಲಿ ಪದವಿ ಪಡೆದಿದ್ದರೂ ದೇಶಸೇವೆಯ ಹಂಬಲದಿಂದ ಸೇನೆ ಸೇರಿದ್ದರು. ಕೆಲವೇ ದಿನಗಳ ಹಿಂದೆ 31ನೆ ಜನ್ಮದಿನವನ್ನಾಚರಿಸಿದ ಮೇಜರ್, ವೃದ್ಧ ತಂದೆತಾಯಿ, ಪತ್ನಿ ಹಾಗೂ ಮೂರುವರ್ಷದ ಮಗಳನ್ನು ಅಗಲಿದ್ದಾರೆ. ಅನೇಕ ವೀರಸೈನಿಕರನ್ನು  ದೇಶಕ್ಕೆ ನೀಡಿದ ಹರಿಯಾಣದ ರೇವರಿ ಮೂಲದ ಸಿಪಾಯಿ ವಿಕ್ರಮ್ ಸಿಂಗ್ ಕೂಡ 31ನೇ ವಯಸ್ಸಿನ ಯುವಪ್ರಾಯದಲ್ಲಿ ಸಣ್ಣವಯಸ್ಸಿನ ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.

ಮೇಜರ್ ರಾಹುಲ್ ಸಿಂಗ್
ಮೇಜರ್ ರಾಹುಲ್ ಸಿಂಗ್
        ಕಳೆದ ಏಪ್ರಿಲ್ 7ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಂಚಲ್‍ತಾನ್ ಹಳ್ಳಿಯಲ್ಲಿ ಅಡಗಿದ್ದ ಉಗ್ರರನ್ನು ಚದುರಿಸುವ ಕಾರ್ಯಾಚರಣೆಯ ನೇತೃತ್ವವನ್ನು 19 ರಾಷ್ಟ್ರೀಯ ರೈಫಲ್ಸ್ ಬಟಾಲಿಯನ್‍ನ ಮೇಜರ ರಾಹುಲ್ ಸಿಂಗ್ ವಹಿಸಿದ್ದರು. ದುರ್ಗಮ ಭೂಪ್ರದೇಶ ಹಾಗೂ ಮಳೆಯ ನಡುವೆ ನಡೆದ ಅತ್ಯಂತ ಕಠಿಣ ಕಾರ್ಯಾಚರಣೆಯ ಸಂಧರ್ಭದಲ್ಲಿ ಸುಮಾರು 15 ಮೀ ಆಳದ ಕಂದಕಕ್ಕೆ ಜಾರಿಬಿದ್ದ ಮೇಜರ್ ಗಂಭೀರವಾಗಿ ಗಾಯಗೊಂಡರು. ಕೇವಲ 30 ವರ್ಷ ಪ್ರಾಯದ ವೀರಯೋಧ, ಉತ್ತರ ಪ್ರದೇಶದ ಮೀರತ್‍ನ ಮೇಜರ್ ರಾಹುಲ್ ಸಿಂಗ್ ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪತ್ನಿ ಹಾಗೂ ಎರಡು ವರ್ಷ ವಯಸ್ಸಿನ ಮಗಳನ್ನು ಅಗಲಿದರು.


ಜೆಸಿಓ ಈರಪ್ಪ
ಜೆಸಿಓ ಈರಪ್ಪ
      ಮಹಾರಾಷ್ಟ್ರದ ಕೊಲ್ಲಾಪುರದವರಾದ ಜ್ಯೂನಿಯರ್ ಕಮಿಶನ್ಡ್ ಆಫಿಸರ್ ನಾೈಬ್ ಸುಬೇದಾರ್ ಕಂಕನವಾಡಿ ದುರದುಂಡಿ ಈರಪ್ಪ 18 ವರ್ಷಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಸೇನಾ ಸೇವೆ ಗೈದ ವೀರಯೋಧ. ಕಳೆದ ಏಪ್ರಿಲ್ 8ರಂದು ಕಾಶ್ಮೀರದ ಝೋನರೇಶಿ ಪ್ರದೇಶದ ನಿಯಂತ್ರಣ ರೇಖೇಯ ಬಳಿ ಪಾಕ್ ಪ್ರೇರಿತ ಉಗ್ರ ಸಂಘಟನೆ ಲಷ್ಕರ್-ಎ-ತೈಬಾದ ಭಯೋತ್ಪಾದಕರೊಂದಿಗೆ ನಡೆದ ಹೋರಾಟದಲ್ಲಿ ಈರಪ್ಪ ಪ್ರಾಣಾರ್ಪಣೆಗೈದರು. ಪ್ರತಿಷ್ಠಿತ ಮರಾಠಾ ರೆಜಿಮೆಂಟ್‍ಗೆ ಸೇರಿದ್ದ ಈರಪ್ಪ ಗುಂಡಿನ ಚಕಮಕಿಯಲ್ಲಿ ಲಷ್ಕರ್‍ನ ಓರ್ವ ಹಿರಿಯ ಕಮಾಂಡರನನ್ನೂ ಸೇರಿದಂತೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದರು. ವೀರಸೈನಿಕ ಈರಪ್ಪ ಪತ್ನಿ ಹಾಗೂ ಮೂವರು ಸಣ್ಣ ವಯಸ್ಸಿನ ಮಕ್ಕಳನ್ನು ಅಗಲಿದ್ದಾರೆ.

No comments:

Post a Comment

ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

( ಪುಂಗವ – 15/06/2020) ಸ್ವದೇಶಿ ಬಳಸಿ - ಚೀನಾ ಬಹಿಷ್ಕರಿಸಿ ವಿಶ್ವದ ಎಲ್ಲ ದೇಶಗಳು ಕೊರೊನಾ ಪಿಡುಗಿನಿಂದ ಮಾನವ ಸಂಕುಲವನ್ನು ಹಾಗೂ ಜನಜೀವನ ವ್ಯವಸ್ಥೆಗಳನ್ನು ಉಳಿಸಿಕೊ...